Thursday, May 2, 2024
spot_img
HomeChamarajanagarಹೆಚ್ಚುತ್ತಿರುವ ಅಸಾಂಕ್ರಾಮಿಕ ರೋಗಗಳ (ಎನ್‌ಸಿಡಿ) ವಿರುದ್ಧ ಹೋರಾಡಲು : ನೂತನ ಯೋಜನೆಗೆ ಚಾಲನೆ

ಹೆಚ್ಚುತ್ತಿರುವ ಅಸಾಂಕ್ರಾಮಿಕ ರೋಗಗಳ (ಎನ್‌ಸಿಡಿ) ವಿರುದ್ಧ ಹೋರಾಡಲು : ನೂತನ ಯೋಜನೆಗೆ ಚಾಲನೆ

ಪಾಲಾರ್ ಪತ್ರಿಕೆ | Palar Pathrike

ಚಾಮರಾಜನಗರ: ಇನ್‌ಸ್ಟಿಟ್ಯೂಟ್ ಆಫ್ ಪಬ್ಲಿಕ್ ಹೆಲ್ತ್ ಬೆಂಗಳೂರು ಹಾಗೂ ಸೀಮೆನ್ಸ್ ಹೆಲ್ತ್‌ನೀರ್ಸ್, ಇಂಡಿಯಾ ವತಿಯಿಂದ ಪ್ರಾರಂಭಿಸಲಾಗಿರುವ ಗ್ರಾಮೀಣ ಕರ್ನಾಟಕದ ಜನರಲ್ಲಿ ಹೆಚ್ಚುತ್ತಿರುವ ಅಸಾಂಕ್ರಾಮಿಕ ರೋಗಗಳ (ಎನ್‌ಸಿಡಿ) ಕುರಿತು ಜಾಗೃತಿ ಮೂಡಿಸುವ ‘ಇಂಪ್ಯಾಕ್ಟ್ ಎನ್‌ಸಿಡಿ’ ಎಂಬ ನೂತನ ಯೋಜನೆಗೆ ನಗರದಲ್ಲಿಂದು ಚಾಲನೆ ನೀಡಲಾಯಿತು. 

ಯೋಜನೆಯನ್ನು ಉದ್ಘಾಟಿಸಿ ಮಾತನಾಡಿದ ಜಿಲ್ಲಾಧಿಕಾರಿಗಳಾದ ಶ್ರೀ ಡಿ.ಎಸ್. ರಮೇಶ್ ರವರು “ಈ ಹಿಂದೆ ಸಾಂಕ್ರಾಮಿಕ ರೋಗಗಳಿಗೆ ಹೋಲಿಸಿದರೆ ನಾವು ಕಡಿಮೆ ಸಂಖ್ಯೆಯ ಅಸಾಂಕ್ರಾಮಿಕ ರೋಗಗಳ ಪ್ರಕರಣಗಳನ್ನು ನೋಡುತ್ತಿದ್ದೆವು, ಆದರೇ ಇತ್ತೀಚಿನ ದಿನಗಳಲ್ಲಿ ಜೀವನಶೈಲಿಯಲ್ಲಿನ ಬದಲಾವಣೆಯಿಂದಾಗಿ, ಅದರಲ್ಲೂ ಅನಾರೋಗ್ಯಕರ ಆಹಾರ ಪದ್ಧತಿ, ಒತ್ತಡದ ಜೀವನ, ನಗರೀಕರಣ, ಮಾದಕ ವಸ್ತುಗಳ ಬಳಕೆ ವಿಶೇಷವಾಗಿ ತಂಬಾಕು ಮತ್ತು ಮದ್ಯಪಾನ ಸೇವನೆ, ದೈಹಿಕ ಶ್ರಮರಹಿತ ಜೀವನದಿಂದಾಗಿ ಅಸಾಂಕ್ರಾಮಿಕ ರೋಗಗಳ ಪ್ರಮಾಣ ಗಣನೀಯವಾಗಿ ಹೆಚ್ಚುತ್ತಿದೆ. ವಿಶೇಷವಾಗಿ ಮಧುಮೇಹ, ಹೃದಯ ಸಂಬಂಧಿ ಕಾಯಿಲೆಗಳು, ಅಧಿಕ ರಕ್ತದೊತ್ತಡದಂತಹ ಜೀವನಶೈಲಿ ಆಧಾರಿತ ಕಾಯಿಲೆಗಳು ಎಲ್ಲೆಡೆ ಕಾಂಡುಬರುತ್ತಿವೆ. ಜೀವನಶೈಲಿಯಲ್ಲಿ ಧನಾತ್ಮಕ ಬದಲಾವಣೆಯೊಂದಿಗೆ, ನಾವು ಈ ಕಾಯಿಲೆಗಳನ್ನು ತಡೆಗಟ್ಟಬಹುದಾಗಿದ್ದು, ಹೆಚ್ಚಿನ ಪ್ರಮಾಣದ ಜಾಗೃತಿ ಮೂಡಿಸುವ ಅಗತ್ಯವಿದೆ. ಜಿಲ್ಲಾಡಳಿತದ ವತಿಯಿಂದ ಈ ಯೋಜನೆಗೆ ಸಂಪೂರ್ಣ ಬೆಂಬಲ ಹಾಗೂ ಅಗತ್ಯ ಸಹಕಾರ ನೀಡಲಾಗುವುದು” ಎಂದರು. 

ಈ ಯೋಜನೆಯು ಎನ್‌ಸಿಡಿಗಳ ತಡೆಗಟ್ಟುವಿಕೆ, ನಿರ್ವಹಣೆ ಮತ್ತು ನಿಯಮಿತ ಆರೈಕೆ ಸಾಮರ್ಥ್ಯವನ್ನು ಸುಧಾರಿಸುವ ಗುರಿಯನ್ನು ಹೊಂದಿದೆ. ಶಿಕ್ಷಣ, ಆರೋಗ್ಯ, ಪೊಲೀಸ್, ಗ್ರಾಮಿಣಾಭಿವೃದ್ಧಿ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಸೇರಿದಂತೆ ವಿವಿಧ ಸರ್ಕಾರಿ ಇಲಾಖೆಗಳ ಸಹಯೋಗ ಹಾಗು ಸಹಭಾಗಿತ್ವದಿಂದ ಮಾತ್ರ  ಇದು ಸಾಧ್ಯವಾಗಲಿದೆ.  

ಈ ಮೂರು ವರ್ಷಗಳ ಯೋಜನೆಯ ಭಾಗವಾಗಿ, ಚಾಮರಾಜನಗರದ 62 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಮೂರು ಹಂತಗಳಲ್ಲಿ ಯೋಜನೆಯ ವ್ಯಾಪ್ತಿಗೆ ತರಲಾಗುವುದು. ನ್ಯಾಷನಲ್ ಪ್ರೋಗ್ರಾಮ್ ಫಾರ್ ಪ್ರಿವೆನ್ಷನ್ ಅಂಡ್ ಕಂಟ್ರೋಲ್ ಆಫ್ ಕ್ಯಾನ್ಸರ್, ಡಯಾಬಿಟಿಸ್ ಕಾರ್ಡಿಯೋ ವ್ಯಾಸ್ಕ್ಯುಲರ್ ಡಿಸೀಸಸ್ ಅಂಡ್ ಸ್ಟ್ರೋಕ್ (NPCDCS)  ರಾಷ್ಟ್ರೀಯ ಕಾರ್ಯಕ್ರಮದ ಅಡಿಯಲ್ಲಿ ಒದಗಿಸಲಾದ ಮಾರ್ಗಸೂಚಿಗಳ ಪ್ರಕಾರ ಸಾಮಾಜಿಕ ಕಾರ್ಯಕರ್ತರು ಮತ್ತು ಸಮುದಾಯ ಆರೋಗ್ಯ ಕಾರ್ಯಕರ್ತರಿಗೆ ವಿಶೇಷವಾಗಿ, ತಡೆಗಟ್ಟುವಿಕೆ ಮತ್ತು ಆರೈಕೆಯ ನಿರಂತರತೆಯ ಕುರಿತು, ತರಬೇತಿ ನೀಡಲಾಗುತ್ತದೆ. ರೋಗಿಗಳಿಗೆ ಆರೈಕೆಯ ಬಗ್ಗೆ ವಿವರವಾದ ಮಾಹಿತಿಯೊಂದಿಗೆ ಅನುಸರಣಾ ಕಿರುಪುಸ್ತಕವನ್ನು ಹಸ್ತಾಂತರಿಸಲಾಗುವುದು ಮತ್ತು ಗ್ರಾಮ-ಪಂಚಾಯತ್, ಪೊಲೀಸ್ ಇಲಾಖೆ, ಗ್ರಾಮ ಪಂಚಾಯಿತಿ ಚುನಾಯಿತ ಸದಸ್ಯರು ಮತ್ತು ವಿದ್ಯಾರ್ಥಿಗಳಿಗೆ ಮದ್ಯ ಮತ್ತು ತಂಬಾಕು ದುಷ್ಪರಿಣಾಮದ ಬಗ್ಗೆ ಜಾಗೃತಿ ಮೂಡಿಸಲಾಗುವುದು. ಆರೋಗ್ಯಕರ ಆಹಾರದ ಆಯ್ಕೆಗಳು ಮತ್ತು ಸಕ್ರಿಯ ಜೀವನಶೈಲಿಯ ಬಗ್ಗೆ ಅವರಿಗೆ ಮಾರ್ಗದರ್ಶನ ನೀಡಲಾಗುವುದು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ವಿಶ್ವೇಶ್ವರಯ್ಯ ಕೆ.ಎಂ ಮಾತನಾಡಿ, “ಯಾವುದೇ ಕಾರ್ಯಕ್ರಮ ಯಶಸ್ವಿಯಾಗಲು ತಂಡವಾಗಿ ಕೆಲಸ ಮಾಡುವುದು ಬಹುಮುಖ್ಯ. ಚಾಮರಾಜನಗರದಲ್ಲಿ ಇನ್‌ಸ್ಟಿಟ್ಯೂಟ್ ಆಫ್ ಪಬ್ಲಿಕ್ ಹೆಲ್ತ್ ಸಂಸ್ಥೆ ಮತ್ತು ಅವರ ಕೆಲಸ ನಮಗೆ ಬಹಳ ಹಿಂದಿನಿಂದಲೂ ತಿಳಿದಿದೆ, ಮತ್ತು ಯೋಜನೆಗಳನ್ನು ತಳಮಟ್ಟಕ್ಕೆ ಕೊಂಡೊಯ್ಯಲು ನಾವು ಯಾವಾಗಲೂ ಜೊತೆಗೂಡಿ ಕೆಲಸ ನಿರ್ವಹಿಸುವುದನ್ನು ಪ್ರೋತ್ಸಾಹಿಸುತ್ತೇವೆ. ನಾವು  ಈಗಾಗಲೇ ಐಪಿಎಚ್ ಬೆಂಗಳೂರು ಹಾಗೂ ಸೀಮೆನ್ಸ್ ಹೆಲ್ತ್‌ನೀರ್ಸ್, ಇಂಡಿಯಾ ಪ್ರಾರಂಭಿಸುತ್ತಿರುವ ಈ ಯೋಜನೆಗೆ ಸಂಪೂರ್ಣ ಬೆಂಬಲವನ್ನು ನೀಡಿದ್ದೇವೆ  ಮತ್ತು ಈ ಸಹಯೋಗದಿಂದ ಸಕಾರಾತ್ಮಕ ಫಲಿತಾಂಶಗಳನ್ನು ನಿರೀಕ್ಷಿಸುತ್ತೇವೆ” ಎಂದು ಅವರು ಹೇಳಿದರು.

ಐಪಿಎಚ್ ಬೆಂಗಳೂರು ಸಂಸ್ಥೆಯ ಸಂಶೋಧನಾ ಸಹಾಯಕ ನಿರ್ದೇಶಕ ಡಾ.ಪ್ರಶಾಂತ್ ಎನ್.ಎಸ್ ಅವರು, ಹೆಚ್ಚುತ್ತಿರುವ ಎನ್ಸಿಡಿಗಳ ನಿಯಂತ್ರಣ ಹಾಗೂ ಸಮರ್ಪಕ ನಿರ್ವಹಣೆಗಾಗಿ ಹೆಚ್ಚಿನ ಸಂಶೋಧನೆ ಹಾಗೂ ಅಧ್ಯಯನಗಳ ಅಗತ್ಯವಿದೆ. ಈ ರೀತಿಯ ಯೋಜನೆಗಳಿಂದಾಗಿ ನಾವು ಸಮಸ್ಯೆಗಳನ್ನು ಸರಿಯಾಗಿ ಅರ್ಥೈಸಲು ಹಾಗೂ ಸೂಕ್ತ ಮಾರ್ಗೋಪಾಯಗಳನ್ನು ಕಂಡುಹಿಡಿಯಲು ಸಹಕಾರಿಯಾಗುತ್ತದೆ. ಚಾಮರಾಜನಗರ ಜಿಲ್ಲಾಡಳಿತದ ಬೆಂಬಲದೊಂದಿಗೆ, ಈ ಯೋಜನೆಯನ್ನು ಜಿಲ್ಲೆಯ ಪ್ರತಿಯೊಂದು ಗ್ರಾಮಗಳಿಗೂ  ಕೊಂಡೊಯ್ಯುವ ಗುರಿಯನ್ನು ನಾವು ಹೊಂದಿದ್ದೇವೆ. ಎಂದರು.

  ಅತಿಥಿಗಳಾಗಿ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಮಂಜುಳಾ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ನಾಗರಾಜು, ಜಿಲ್ಲಾ ಕ್ಷಯರೋಗ ಅಧಿಕಾರಿ ಡಾ.ರವಿಕುಮಾರ್, ಜಿಲ್ಲಾ ಎನ್ವಿಬಿಡಿಸಿಪಿ ಅಧಿಕಾರಿ  ಡಾ.ಕಾಂತರಾಜು, ಸೀಮೆನ್ಸ್ ಹೆಲ್ತಿನೀರ್ಸ್ ಇಂಡಿಯಾದ ಶ್ವೇತಾಂಜಲಿ, ತಾಲೂಕು ಆರೋಗ್ಯಾಧಿಕಾರಿಗಳು ಉಪಸ್ಥಿತರಿದ್ದರು. 

ಯೋಗೀಶ್, ಐಪಿಎಚ್ ಬೆಂಗಳೂರು ಸಿಬ್ಬಂದಿ, ಆಶಾ ಕಾರ್ಯಕರ್ತೆಯರು, ಸಮುದಾಯ ಆರೋಗ್ಯಾಧಿಕಾರಿಗಳು, ನರ್ಸಿಂಗ್ ವಿದ್ಯಾರ್ಥಿಗಳು, ಜಿಲ್ಲಾ ಆರೋಗ್ಯ ಇಲಾಖೆ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments