ಪಾಲಾರ್ ಪತ್ರಿಕೆ | Palar Pathrike
ತುಮಕೂರು: ರಾಜ್ಯ ಸರ್ಕಾರ ಜಾರಿಗೊಳಿಸುವ ಯೋಜನೆಗಳನ್ನು ಅನುಷ್ಠಾನಗೊಳಿಸಿ ಅಂತಿಮ ರೂಪ ನೀಡುವುದು ವಿವಿಧ ಇಲಾಖೆಗಳ ಇಂಜಿನಿಯರ್‌ಗಳ ಆದ್ಯ ಕರ್ತವ್ಯವಾಗಿದ್ದು, ಜವಾಬ್ದಾರಿ ಸ್ಥಾನದಲ್ಲಿರುವ ಇಂಜಿನಿಯರ್‌ಗಳು ಈ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸುವಂತೆ ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಣಾ ಅಧಿಕಾರಿ ಜಿ.ಪ್ರಭು ಸೂಚಿಸಿದರು.
ಜಿಲ್ಲಾ ಪಂಚಾಯತ್ ವಿಡಿಯೋ ಕಾನ್ಫರೆನ್ಸ್ ಸಭಾಂಗಣದಲ್ಲಿAದು ಜಲಜೀವನ ಮಿಷನ್ (ಜೆಜೆಎಂ) ಯೋಜನೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜೆಜೆಎಂ ಯೋಜನೆಯಡಿಯಲ್ಲಿ ಬಾಕಿ ಉಳಿದಿರುವ ಕಾಮಗಾರಿಗಳ ಪ್ರಗತಿಯು ಆಗಸ್ಟ್ 31ರೊಳಗಾಗಿ ಶೇಕಡಾ 95ರಷ್ಟು ಪೂರ್ಣಗೊಳ್ಳಬೇಕು. ತಾಲ್ಲೂಕು ಪಂಚಾಯತಿ ಕಾರ್ಯನಿರ್ವಹಣಾಧಿಕಾರಿಗಳು ಕಾಮಗಾರಿಗಳನ್ನು ಪರಿಶೀಲಿಸಿ ಪ್ರಮಾಣಿಕರಿಸಿದ ನಂತರ ಕಾಮಗಾರಿ ಘೋಷಣೆ ಮಾಡಿ ಹಸ್ತಾಂತರಿಸಬೇಕು ಎಂದು ಹೇಳಿದರು.
ಜೆಜೆಎಂ ಯೋಜನೆಯನ್ನು ಅನುಷ್ಠಾನ ಮಾಡಲು ತಾಂತ್ರಿಕ ಸಮಸ್ಯೆ, ಗ್ರಾಮಸ್ಥರ ವಿರೋಧ ಹಾಗೂ ಏಜೆನ್ಸಿಗಳ ತೊಂದರೆ ಇರುವ ಗ್ರಾಮಗಳ ಪಟ್ಟಿ ಮಾಡಿಕೊಟ್ಟರೆ ಆ ಗ್ರಾಮಗಳಿಗೆ ಇಓ ಮತ್ತು ಪಿಡಿಓ ಅವರನ್ನು ಕಳುಹಿಸಿ ಸಮಸ್ಯೆ ಬಗೆಹರಿಸುವಂತೆ ನಿರ್ದೇಶನ ನೀಡಲಾಗುವುದು ಹಾಗೂ ಅವಶ್ಯವಿದ್ದಲ್ಲಿ ಸ್ವತಃ ತಾವೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುವುದಾಗಿ ತಿಳಿಸಿದರು.
ಕೆಲವು ಗ್ರಾಮಗಳಲ್ಲಿ ಈ ಯೋಜನೆಯನ್ನು ಪ್ರಾರಂಭ ಮಾಡಲು ರಾಜಕೀಯವಾಗಿ ಅಡ್ಡಿಪಡಿಸುತ್ತಿರುವ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಲಾಗುವುದು ಹಾಗೂ ಆ ಗ್ರಾಮಗಳಿಗೆ ಯೋಜನೆ ಬೇಡವೆಂದಲ್ಲಿ ಪಿಡಿಓ ಅವರಿಂದ ಸಭೆ ನಡೆಸಿ ನಿರ್ಣಯ ಮಾಡಲಾಗುವುದು ಎಂದು ಹೇಳಿದರು.
ಕಾಮಗಾರಿಗಳ ಭೌತಿಕ ಪ್ರಗತಿಯ ಜೊತೆ ಆರ್ಥಿಕ ಪ್ರಗತಿಯು ತಾಳೆ ಆಗಬೇಕು ಎಂದು ತಿಳಿಸಿದರು.
ಇಂಜಿನಿಯರ್‌ಗಳು ಮತ್ತು ಎಜೆನ್ಸಿಯವರು ಸಮನ್ವಯದೊಂದಿಗೆ ಗುಣಮಟ್ಟದ ಕಾಮಗಾರಿಗಳನ್ನು ಮಾಡುವುದರ ಮೂಲಕ ಆ ಗ್ರಾಮದ ಜನರ ವಿಶ್ವಾಸವನ್ನು ಪಡೆದು ನಂತರ ಪೂರ್ಣಗೊಂಡ ಕಾಮಗಾರಿಗಳನ್ನು ಘೋಷಣೆ ಮಾಡಬೇಕು ಎಂದು ತಿಳಿಸಿದರು.
ತುರುವೇಕೆರೆ ತಾಲ್ಲೂಕಿನಲ್ಲಿ ಜೆಜೆಎಂ ಯೋಜನೆಯಲ್ಲಿ 20 ಕಾಮಗಾರಿಗಳನ್ನು ಕೈಗೊಂಡಿದ್ದು, ಅದರಲ್ಲಿ ಪೂರ್ಣಗೊಂಡಿರುವ ಹಾಗೂ ಪ್ರಗತಿಯಲ್ಲಿರುವ ಕಾಮಗಾರಿಗಳನ್ನು ಶೀಘ್ರದಲ್ಲೆ ಪರಿಶೀಲನೆ ನಡೆಸಲಾಗುವುದು ಎಂದು ಹೇಳಿದರು.
ಸಭೆಯಲ್ಲಿ ಪಂಚಾಯತ್ ರಾಜ್ ಇಂಜಿನಿಯರ್ ವಿಭಾಗದ ಕಾರ್ಯಪಾಲಕ ಅಭಿಯಂತರ ರವೀಶ್, ಮಧುಗಿರಿ ಉಪವಿಭಾಗ ಇಇ, ಎಲ್ಲಾ ತಾಲ್ಲೂಕುಗಳ ಇಂಜಿನಿಯರ್‌ಗಳು ಉಪಸ್ಥಿತರಿದ್ದರು.