ಪಾಲಾರ್ ಪತ್ರಿಕೆ | Palar Pathrike
ಬಾಗೇಪಲ್ಲಿ: ಪಟ್ಟಣದ ನ್ಯಾಷನಲ್ ಕಾಲೇಜಿನಲ್ಲಿ ರಾಜ್ಯ ಒಕ್ಕಲಿಗರ ಪ್ರಧಾನ ಕಾರ್ಯದರ್ಶಿ ಟಿ.ಕೋನಪ್ಪ ರೆಡ್ಡಿ ಅವರು ನೇತೃತ್ವದಲ್ಲಿ ಬೃಹತ್ ಉದ್ಯೋಗ ಮೇಳ ಆಯೋಜಿಸಲಾಗಿತ್ತು. 67 ಕ್ಕೂ ಹೆಚ್ಚು ಕಂಪನಿಗಳು ಉದ್ಯೋಗ ಮೇಳದಲ್ಲಿ ಪಾಲ್ಗೊಂಡಿದ್ದವು. 480 ಉದ್ಯೋಗಕಾಂಕ್ಷಿಗಳು ಮೇಳದಲ್ಲಿ ಪಾಲ್ಗೊಂಡಿದ್ದು, ಈ ಪೈಕಿ 142 ಮಂದಿಗೆ ಸ್ಥಳದಲ್ಲಿಯೇ ಉದ್ಯೋಗ ಪತ್ರಗಳನ್ನು ಕರ್ನಾಟಕ ರಾಜ್ಯ ಆರೋಗ್ಯ ಸಚಿವ ಕೆ.ಸುಧಾಕರ್ ವಿತರಣೆ ಮಾಡಿದರುಅದರಲ್ಲಿ 9 ಮಂದಿ ವಿಕಲಚೇತನರಿಗೆ ಉದ್ಯೋಗ ಪತ್ರಗಳನ್ನು ವಿತರಣೆ ಮಾಡಿದ್ದು ವಿಶೇಷವಾಗಿತ್ತು.
ಈ ಸಂದರ್ಭದಲ್ಲಿ ಆರೋಗ್ಯ ಸಚಿವ ಕೆ.ಸುಧಾಕರ್ ಮಾತನಾಡಿ, ಉದ್ಯೋಗ ಇಂದಿನ ಅವಶ್ಯಕತೆಯಾಗಿದೆ. ಉದ್ಯೋಗ ಮಾಡುವ ಉತ್ಸಾಹವಿದ್ದರೂ ಸರಿಯಾದ ಮಾರ್ಗದರ್ಶನವಿಲ್ಲದೆ ಹಲವು ಯುವಕರು ನಿರುದ್ಯೋಗಿಗಳಾಗಿ ಉಳಿಯುತ್ತಿದ್ದಾರೆ. ಉದ್ಯೋಗ ಮೇಳದ ಆಯೋಜನೆ ಮೂಲಕ ಯುವಕರಿಗೆ ಉದ್ಯೋಗದ ಮಾರ್ಗ ತೋರಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಟಿ.ಕೋನಪ್ಪ ರೆಡ್ಡಿ ಉದ್ಯೋಗ ಮೇಳ ಆಯೋಜಿಸಿರುವುದು ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದರು.
ಕೊರೊನಾದಿಂದಾಗಿ ಆರ್ಥಿಕ ಪರಿಸ್ಥಿತಿ ಕುಸಿತದಿಂದ ಉದ್ಯೋಗಗಳ ಸಮಸ್ಯೆ ಉದ್ಭವಿಸಿತು. ಪ್ರಸ್ತುತ ಚೇತರಿಕೆಯ ಪರಿಸ್ಥಿತಿ ನಿರ್ಮಾಣವಾಗಿದ್ದು, ಉದ್ಯೋಗಾವಕಾಶಗಳು ಹೆಚ್ಚಾಗುತ್ತಿವೆ ಎಂದರು.
ಎಲ್ಲರಿಗೂ ಉದ್ಯೋಗ ದೊರೆಯುತ್ತಿಲ್ಲ. ಉದ್ಯೋಗ ಹುಡುಕಿಕೊಂಡು ಕಂಪನಿಯಿಂದ ಕಂಪನಿಗಳಿಗೆ ಅಲೆದಾಡಬೇಕಾಗುತ್ತದೆ. ಉದ್ಯೋಗ ಮೇಳದಲ್ಲಿ ವಿವಿಧ ಕಂಪನಿಗಳು ಒಂದೆಡೆ ಸೇರುವುದರಿಂದ ಒಂದೇ ಸೂರಿನಲ್ಲಿ ಉದ್ಯೋಗದ ವಿವಿಧ ಅವಕಾಶಗಳು ದೊರೆಯುತ್ತವೆ. ಗ್ರಾಮಾಂತರ ಭಾಗದ ಯುವ ಸಮುದಾಯ ಉದ್ಯೋಗ ಮೇಳವನ್ನು ಸದುಪಯೋಗ ಪಡಿಸಿಕೊಂಡುರುವುದು ಸಂತಸ ತಂದಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ನ್ಯಾಷನಲ್ ಕಾಲೇಜಿನ ಗೌರವ ಕಾರ್ಯದರ್ಶಿ ವೆಂಟಶಿವಾರೆಡ್ಡಿ, ಪದವಿ ಪ್ರಾಂಶುಪಾಲರಾದ ಸೋಮಶೇಖರ್, ಪದವಿ ಪೂರ್ವ ಕಾಲೇಜು ಪ್ರಾಂಶುಪಾಲರಾದ ಕೆ.ಟಿ.ವೀರಾಂಜನೇಯಲು, ಉಪಪ್ರಾಂಶುಪಾಲರಾದ ವೆಂಕಟೇಶ ಬಾಬು,, ಮುಖಂಡರಾದ ಜೆ.ಪಿ. ಚಂದ್ರಶೇಖರ ರೆಡ್ಡಿ ,ಪೂಜಪ್ಪ,ವೆಂಕಟಶಿವರೆಡ್ಡಿ ಬಿಎಸ್ ಎನ್ ಎಲ್ ವೆಂಕಟೇಶ ,ಗಣೇಶ್, ಮಂಜುನಾಥ, ಸುನೀಲ್ ಇನ್ನೂ ಮುಂತಾದವರು ಪ್ರಮುಖರು ಪಾಲ್ಗೊಂಡಿದ್ದರು.