Monday, April 29, 2024
spot_img
HomeRamnagarರಾಮನಗರ ಜಿಲ್ಲಾ ಕೋವಿಡ್ ಆಸ್ಪತ್ರೆಗೆ ಅಗತ್ಯ ಸಿಬ್ಬಂದಿ ನಿಯೋಜನೆ ಕೊರೋನಾ, ಓಮೈಕ್ರಾನ್ ಚಿಕಿತ್ಸಾ ವ್ಯವಸ್ಥೆ ಪರಿಶೀಲಿಸಿದ...

ರಾಮನಗರ ಜಿಲ್ಲಾ ಕೋವಿಡ್ ಆಸ್ಪತ್ರೆಗೆ ಅಗತ್ಯ ಸಿಬ್ಬಂದಿ ನಿಯೋಜನೆ ಕೊರೋನಾ, ಓಮೈಕ್ರಾನ್ ಚಿಕಿತ್ಸಾ ವ್ಯವಸ್ಥೆ ಪರಿಶೀಲಿಸಿದ ಜಿಲ್ಲಾ ಉಸ್ತುವಾರಿ ಸಚಿವರು

ರಾಮನಗರ: ಕೋವಿಡ್ ಮತ್ತು ಓಮೈಕ್ರಾನ್ ಸೋಂಕು ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾ ಕೋವಿಡ್ ಆಸ್ಪತ್ರೆಗೆ ಅಗತ್ಯವಿರುವ ವೈದ್ಯಕೀಯ ಮತ್ತು ಅರೆವೈದ್ಯಕೀಯ ಸಿಬ್ಬಂದಿಯನ್ನು ನಿಯೋಜನೆ ಮೇರೆಗೆ ತಕ್ಷಣವೇ ಒದಗಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಮತ್ತು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಹೇಳಿದ್ದಾರೆ.

ನೂತನ ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿ ಕೋವಿಡ್ ಚಿಕಿತ್ಸಾ ಘಟಕಕ್ಕೆ ಮಂಗಳವಾರ ಭೇಟಿ ನೀಡಿ, ಸಮಗ್ರ ಪರಿಶೀಲನೆ ಸಂದರ್ಭದಲ್ಲಿ  ಸಿಬ್ಬಂದಿ ಕೊರತೆಯ ವಿಷಯವನ್ನು ಗಮನಕ್ಕೆ ತರಲಾಯಿತು. ಕೂಡಲೇ ಬೆಂಗಳೂರಿನ ವೈದ್ಯಕೀಯ ಮತ್ತು ಆರೋಗ್ಯ ಆಯುಕ್ತರೊಂದಿಗೆ ಮಾತನಾಡಿದ ಅವರು ಕ್ರಮಕ್ಕೆ ಸೂಚಿಸಿದರು.

ಸದ್ಯಕ್ಕೆ ಆಸ್ಪತ್ರೆಯಲ್ಲಿ ನಡೆಯುತ್ತಿರುವ ಕೊರೋನಾ ಮತ್ತು ಓಮೈಕ್ರಾನ್ ಸೋಂಕು ಪತ್ತೆ ಪರೀಕ್ಷೆಯ ಸಂಖ್ಯೆಯನ್ನು ಹೆಚ್ಚು ಮಾಡಿ, ತ್ವರಿತ ಗತಿಯಲ್ಲಿ ಫಲಿತಾಂಶ ದೊರಕಿಸಿಕೊಂಡು, ಕೂಡಲೇ ಸೂಕ್ತ ಚಿಕಿತ್ಸೆ ಆರಂಭಿಸಬೇಕು. ಸಕಲ ವ್ಯವಸ್ಥೆಯನ್ನೂ ಮಾಡಿಕೊಂಡು, ಸನ್ನದ್ಧ ಸ್ಥಿತಿಯಲ್ಲಿರಬೇಕು ಎಂದು ಅವರು ಹೇಳಿದರು.

ಕೊರೋನಾ ಮತ್ತು ಓಮೈಕ್ರಾನ್ ಸೋಂಕುಗಳನ್ನು ತಡೆಯಲು ಸರಿಯಾದ ಮುನ್ನೆಚ್ಚರಿಕೆ ಮತ್ತು ಪರೀಕ್ಷೆಗಳೇ ಅಗತ್ಯವಾಗಿವೆ. ಈ ನಿಟ್ಟಿನಲ್ಲಿ ಸಾರ್ವಜನಕರಿಗೆ ಸಮರ್ಪಕ ಅರಿವು ಮೂಡಿಸಬೇಕು. ಮಿಕ್ಕಂತೆ, ಇದುವರೆಗೂ ಯಾರು ಲಸಿಕೆ ತೆಗೆದುಕೊಂಡಿಲ್ಲವೋ ಅಂಥವರನ್ನು ಸಂಪರ್ಕಿಸಿ, ಅವರಿಗೆಲ್ಲ ಲಸಿಕೆ ಹಾಕಬೇಕು. 60 ವರ್ಷ ಮೇಲ್ಪಟ್ಟವರಿಗೆ ಬೂಸ್ಟರ್ ಡೋಸ್ ಮತ್ತು 15 ರಿಂದ 18 ವರ್ಷಗಳ ಒಳಗೆ ಇರುವವರಿಗೆ ಲಸಿಕೆ ಕೊಡಲು ತಕ್ಕ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅವರು ಹೇಳಿದರು.

ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಸದ್ಯಕ್ಕೆ 66 ಸೋಂಕಿತರು ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಈಗಾಗಲೇ ಜಿಲ್ಲೆಯಲ್ಲಿ ಶೇ.90ಕ್ಕಿಂತ ಹೆಚ್ಚು ಅರ್ಹರಿಗೆ ಲಸಿಕೆ ಹಾಕಿರುವುದರಿಂದ ಆತಂಕ ಪಡಬೇಕಾದ ಅಗತ್ಯವಿಲ್ಲ. ಆದರೆ, ಸೋಂಕಿತರು ಹೆಚ್ಚಾಗುವ ಸಂಭವ ಇರುವುದರಿಂದ ಹಾಸಿಗೆಗಳ ಸಾಮರ್ಥ್ಯವನ್ನು ಅದಕ್ಕೆ ತಕ್ಕಂತೆ ಕೂಡಲೇ ಹೆಚ್ಚಿಸಿಕೊಳ್ಳಬೇಕು ಎಂದು ಅವರು ವೈದ್ಯಾಧಿಕಾರಿಗಳಿಗೆ ಹೇಳಿದರು.

ದೇಶದಲ್ಲಿ ಈಗಾಗಲೇ 150 ಕೋಟಿ ಡೋಸ್ ಲಸಿಕೆಗಳನ್ನು ಹಾಕಲಾಗಿದ್ದು, ರಾಜ್ಯದಲ್ಲಿ ಈ ಸಂಖ್ಯೆ 9 ಕೋಟಿಯನ್ನು ದಾಟಿದೆ. ಆದ್ದರಿಂದ ಸೋಂಕಿನ ವಿರುದ್ಧ ಪ್ರತಿರೋಧ ಶಕ್ತಿ ಸಹಜವಾಗಿಯೇ ಹೆಚ್ಚಾಗಿರುತ್ತದೆ. ಆದರೂ ಸಾರ್ವಜನಿಕರು ಮುಂಜಾಗ್ರತಾ ಕ್ರಮಗಳನ್ನು ಮರೆಯುವಂತಿಲ್ಲ. ಪರಿಸ್ಥಿತಿ ನೋಡಿಕೊಂಡು ಸರಕಾರವು ಮುಂದಿನ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಅಶ್ವತ್ಥನಾರಾಯಣ ನುಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ.ನಿರಂಜನ್, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ: ಶಶಿಧರ್,  ಡಿ.ಎಲ್ ಒ ಡಾ: ಮಂಜುನಾಥ್ ಹಾಗೂ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments