ಪಾಲಾರ್ ಪತ್ರಿಕೆ | Palar Pathrike
ಚಾಮರಾಜನಗರ :ಮಹಿಳೆಯರು ಸಮಾಜದ ಉನ್ನತಮಟ್ಟದಲ್ಲಿ ಗುರುತಿಸಿಕೊಳ್ಳಲು ಕಾನೂನಿನ ಅರಿವು ಅಗತ್ಯ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಬಿ. ಎಸ್. ಭಾರತಿ ತಿಳಿಸಿದರು. ನಗರದ ಜಿಲ್ಲಾ ನ್ಯಾಯಾಲಯದ ಅವರಣದಲ್ಲಿರುವ ಜಿಲ್ಲಾ ವಕೀಲರ ಸಂಘದ ಗ್ರಂಥಾಲಯದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯಾಂಗ ಮತ್ತು ಜಿಲ್ಲಾ ವಕೀಲರ ಸಂಘದ ಸಂಯುಕ್ತಾಶ್ರಯದಲ್ಲಿ ನಡೆದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಶಿಕ್ಷಣದಿಂದ ವಂಚಿತರಾಗಿರುವ ಸಾಕಷ್ಟು ಮಹಿಳೆಯರು ಅನ್ಯಾಯಕ್ಕೆ ಒಳಗಾಗಿದ್ದಾರೆ. ಅವರಿಗೆ ಕಾನೂನಿನ ಅರಿವಿನ ಕೊರತೆ ಇದೆ. ಮಹಿಳೆಯರು ಸಮಾಜದ ಮುಖ್ಯವಾಹಿನಿಗೆ ಬಂದು ಸ್ವತಂತ್ರವಾಗಿ ಬದುಕಲು ಕಲಿಯಬೇಕು. ಮಹಿಳೆಯರು ಶೈಕ್ಷಣಿಕವಾಗಿ ಮುನ್ನೆಲೆಗೆ ಬರಬೇಕು. ಮಹಿಳೆಯರ ಉನ್ನತೀಗಾಗಿ ಸರ್ಕಾರವು ಹತ್ತು ಹಲವು ಯೋಜನೆಗಳನ್ನು ರೂಪಿಸಿ ಜಾರಿಗೊಳಿಸಿದೆ. ಸರ್ಕಾರದ ಯೋಜನೆ, ಕಾರ್ಯಕ್ರಮಗಳ ಸದುಪಯೋಗ ಪಡೆದು ಮಹಿಳೆಯರು ಸಬಲೀಕರಣಗೊಳ್ಳಬೇಕು ಎಂದು ನ್ಯಾಯಾಧೀಶರಾದ ಬಿ. ಎಸ್. ಭಾರತಿ ಅವರು ತಿಳಿಸಿದರು. ಹೆಚ್ಚುವರಿ ಜಿಲ್ಲಾ ಸೆಷೆನ್ಸ್ ನ್ಯಾಯಾಧೀಶರಾದ ಎನ್. ಆರ್. ಲೋಕಪ್ಪ ಅವರು ಮಾತನಾಡಿ ಮಹಿಳೆಯರು ಸಾಮಾಜಿಕ, ರಾಜಕೀಯ, ಶೈಕ್ಷಣಿಕ, ಕ್ರೀಡೆ, ನ್ಯಾಯಾಂಗ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಪುರುಷರಷ್ಟೇ ಸಮಾನ ಸ್ಥಾನಮಾನಗಳಗಳನ್ನು ಗಳಿಸಿರುವುದನ್ನು ಇತ್ತೀಚಿನ ದಿನಗಳಲ್ಲಿ ಕಾಣಬಹುದು. ಮಹಿಳೆಯರು ಶೈಕ್ಷಣಿಕವಾಗಿ ಬೆಳೆದಾಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ. ಶಿಕ್ಷಣದಿಂದ ವಂಚಿತರಾದ ಮಹಿಳೆಯರು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಸಮಾಜದಲ್ಲಿ ಎಲ್ಲರು ಸಮಾನರು. ಯಾವುದೇ ಹಕ್ಕುಗಳು, ಕಾನೂನುಗಳು ಮಹಿಳೆಯರ ಏಳಿಗೆಗೆ ನೆರವಾಗಬೇಕು ಎಂದರು. ಕಾರ್ಯಕ್ರಮದಲ್ಲಿ ಕೃಷ್ಣ ಮೆಡಿಕಲ್ ಮಾಲೀಕರಾದ ಸುಜಿನಿ ಅವರನ್ನು ಸನ್ಮಾನಿಸಲಾಯಿತು. ಅಲ್ಲದೇ ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ವಿಜೇತರಾದ ಮಹಿಳಾ ವಕೀಲರು ಮತ್ತು ನ್ಯಾಯಾಧೀಶರಿಗೆ ಬಹುಮಾನ ವಿತರಿಸಲಾಯಿತು.
ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ. ಶ್ರೀಧರ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಉಮ್ಮತೂರು ಇಂದುಶೇಖರ್, ಹೆಚ್ಚುವರಿ ಜಿಲ್ಲಾ ಮತ್ತು ಸೆಷೆನ್ಸ್ ನ್ಯಾಯಾಧೀಶರಾದ ಎ.ಸಿ. ನಿಶಾರಾಣಿ, ಹಿರಿಯ ಸಿವಿಲ್ ನ್ಯಾಯಾಧೀಶರಾದ ಬಿ.ಎಸ್. ಹೊನ್ನಸ್ವಾಮಿ, ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ಚಂಪಕಾ, ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಎನ್. ವೆಂಕಟೇಶ್, ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ಎನ್. ನಿವೇದಿತಾ, ಜಿಲ್ಲಾ ವಕೀಲರ ಸಂಘದ ಉಪಾಧ್ಯಕ್ಷರಾದ ಎಸ್. ಮಂಜು, ಪ್ರಧಾನ ಕಾರ್ಯದರ್ಶಿ ಎನ್.ಕೆ. ವಿರೂಪಾಕ್ಷಸ್ವಾಮಿ, ಇತರರು ಕಾರ್ಯಕ್ರಮದಲ್ಲಿ ಇದ್ದರು.
ಮಾ. 18ರಂದು ಹಿಮವದ್ ಗೋಪಾಲಸ್ವಾಮಿ ಬ್ರಹ್ಮರಥೋತ್ಸವ : 16ರಿಂದ 21ರವೆರೆಗೆ ವಿವಿಧ ಪೂಜಾ ಕೈಂಕರ್ಯ ಚಾಮರಾಜನಗರ. ಮಾರ್ಚ್ 16:- ಗುಂಡ್ಲುಪೇಟೆ ತಾಲೂಕಿನ ಶ್ರೀ ಹಿಮವದ್ ಗೋಪಾಲಸ್ವಾಮಿಯವರ ಬ್ರಹ್ಮ ರಥೋತ್ಸವವು ಮಾರ್ಚ್ 18ರಂದು ನಡೆಯಲಿದ್ದು, ಈ ಸಂಬಂಧ ಮಾರ್ಚ್ 16ರಿಂದ 21ರವರೆಗೆ ದೇವಾಲಯದಲ್ಲಿ ವಿವಿಧ ಪೂಜಾ ಕೈಂಕರ್ಯಗಳು ನಡೆಯಲಿವೆ.
ಮಾರ್ಚ್ 16ರಂದು ಬೆಳಿಗ್ಗೆ ಉತ್ಸವ, ಪಷ್ಪಬಲಿ, ಧ್ವಜಾರೋಹಣ, ಸಂಜೆ ಭೇರಿತಾಡನ ಯಾಗಶಾಲಾ ಪ್ರವೇಶ, 17ರಂದು ಬೆಳಿಗ್ಗೆ ಶ್ರೀಯವರ ಉತ್ಸವ, ಸಂಜೆ 4ಗಂಟೆಗೆ ಕಾಶಿಯಾತ್ರಾ ಉತ್ಸವ, ಸಂಬಂಧ ಮಾಲಾಪೂರ್ವಕ ಶ್ರೀ ರುಕ್ಮಿಣಿ ಸತ್ಯಭಾಮ ಸಹಿತ ಶ್ರೀ ಹಿಮವದ್ ಗೋಪಾಲಸ್ವಾಮಿಯವರ ದಿವ್ಯಕಲ್ಯಾಣೋತ್ಸವ, 18ರಂದು ಬೆಳಿಗ್ಗೆ ಡೋಲಾಯಮಾನಂ, ಗೋವಿಂದಂ ಮಂಚಸ್ಥಂ ಮಧುಸೂಧನಂ ರಥಸ್ಥಂ ಕೇಶವಂಷ್ಠ್ವಾಪುನರ್ಜನ್ಮ ನವಿದ್ಯತೇ ಎಂಬ ಮರ್ಯಾದೆಯಂತೆ ಶ್ರೀಯವರ ದಿವ್ಯ ಬ್ರಹ್ಮ ರಥೋತ್ಸವ ನಡೆಯಲಿದ್ದು, ಸಂಜೆ ಶಾಂತ್ಯುತ್ಸವ ಜರುಗಲಿದೆ.
ಮಾರ್ಚ್ 19ರಂದು ಬೆಳಿಗ್ಗೆ ಉತ್ಸವ ಕೈಂಕರ್ಯ ಮತ್ತು ಬೆಳ್ಳಿ ಗರುಡೋತ್ಸವ ಸಂಜೆ ಡೋಲೋತ್ಸವ ಶಯನೋತ್ಸವ, 20ರಂದು ಸಂಧಾನ ಲೀಲೋತ್ಸವ, ಅವಭೃತ ಸ್ನಾನ ಸಂಜೆ ಉತ್ಸವ, ಫಣಿಮಾಲಾ ಪ್ರಬಂಧಸೇವೆ, ಪೂರ್ಣಾಹುತಿ, 21ರಂದು ಬೆಳಿಗ್ಗೆ ಮಹಾಭಿಷೇಕ, ಮಹಾಮಂಗಳಾರತಿ, ದ್ವಾದಶಾರಾಧನಾ, ಪುಷ್ಪಯಾಗ ಧ್ವಜಾರೋಹಣ, ಉಧ್ವಾಸನ ಪ್ರಬಂಧ ಸೇವೆ ಸೇತೂ ಸೇವೆ ಮೂಕಬಲಿ ಕಾರ್ಯಕ್ರಮಗಳು ನಡೆಯಲಿವೆ ಎಂದು ಪ್ರಕಟಣೆ ತಿಳಿಸಿದೆ.