Wednesday, May 8, 2024
spot_img
HomeChikballapurಸಾಮಾನ್ಯ ಕಾನೂನು ಅರಿವು ಅತ್ಯವಶ್ಯಕ: ಭೈರಪ್ಪ ಶಿವಲಿಂಗ ನಾಯಿಕ

ಸಾಮಾನ್ಯ ಕಾನೂನು ಅರಿವು ಅತ್ಯವಶ್ಯಕ: ಭೈರಪ್ಪ ಶಿವಲಿಂಗ ನಾಯಿಕ

ಚಿಕ್ಕಬಳ್ಳಾಪುರ: ದೈನಂದಿನ ಜೀವನಕ್ಕೆ ಅನ್ವಯವಾಗುವ ಸಾಮಾನ್ಯ ಕಾನೂನುಗಳ ಕುರಿತು ಕನಿಷ್ಠ ಮಟ್ಟದ  ಮಾಹಿತಿಯನ್ನು  ಪ್ರತಿಯೊಬ್ಬರು  ಅವಶ್ಯಕವಾಗಿ  ಅರಿಯಬೇಕು  ಎಂದು ಗೌರವಾನ್ವಿತ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಭೈರಪ್ಪ ಶಿವಲಿಂಗ ನಾಯಿಕ ಅವರು ತಿಳಿಸಿದರು. 

ಅವರು  ಸೋಮವಾರ ನಗರದ ಎಸ್.ಜೆ.ಸಿ. ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿನ ಸಿ.ಎಸ್.ಸಿ ಸಭಾಂಗಣದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕಂಪ್ಯೂಟರ್ ವಿಜ್ಞಾನ, ಎಂಜಿನಿಯರಿಂಗ್ ಹಾಗೂ ಎಸ್.ಜೆ.ಸಿ.ಐ.ಟಿ ಕಾಲೇಜು ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ‘ಕಾನೂನು ಅರಿವು ಮತ್ತು ನೆರವು’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಸರ್ಕಾರದ ವಿವಿಧ ಸೌಲಭ್ಯಗಳನ್ನು ಪಡೆಯಲು ಕನಿಷ್ಠ ಕಾನೂನಿನ ತಿಳುವಳಿಕೆ ಇರಬೇಕು. ಅಲ್ಲದೆ ಕಾನೂನು ತಿಳಿದವರು ತಿಳಿಯದವರಿಗೆ ತಿಳಿಸಿ ಹೇಳುವ ಕೆಲಸ ಮಾಡಬೇಕು.  ಕಾನೂನು ಅರಿವಿಲ್ಲದೆ  ಸಮಾಜದಲ್ಲಿ ತಮ್ಮಗೆ ಸಿಗಬೇಕಾದ ಹಕ್ಕು ಮತ್ತು ನ್ಯಾಯದಿಂದ ಯಾವುದೇ  ವ್ಯಕ್ತಿಯೂ  ವಂಚಿತರಾಗಬಾರದು. ಈ ನಿಟ್ಟಿನಲ್ಲಿ ಕಾನೂನು ಸೇವೆಗಳ ಪ್ರಾಧಿಕಾರದಿಂದ ಕಾನೂನು ಅರಿವು ಮೂಡಿಸುವ ಕಾರ್ಯವನ್ನು ಮಾಡಲಾಗುತ್ತಿದೆ ಎಂದು ಹೇಳಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಮಾತನಾಡಿ, ಪ್ರಸ್ತುತ ಎಲ್ಲ ವಸ್ತುಗಳ ಖರೀದಿಗೆ ಜನರು ಆನ್ ಲೈನ್ ಮೊರೆ ಹೋಗುತ್ತಿದ್ದಾರೆ. ಇದರಿಂದ ಸಾಮಾಜಿಕ ಜಾಲತಾಣ ಬಳಕೆ ಮಾಡುವಾಗ ಮತ್ತು ಆನ್ ಲೈನ್ ವ್ಯವಹಾರ ಮಾಡುವಾಗ ಎಚ್ಚರದಿಂದ ಇರಬೇಕಾಗುತ್ತದೆ. ಸೈಬರ್ ಕಳ್ಳರು ಆನ್ ಲೈನ್ ನಲ್ಲಿ ಹಣ ಅಥವಾ ನಿಮ್ಮ ವೈಯಕ್ತಿಕ ಮಾಹಿತಿ ಕೇಳಿದರೆ ಯಾವುದೇ ಕಾರಣಕ್ಕೂ ನೀಡಬಾರದು. ಒಂದು ವೇಳೆ ಸೈಬರ್ ಕಳ್ಳರು  ವಂಚಿಸಲು ಯತ್ನಿಸಿದಲ್ಲಿ ಹಾಗೂ  ವಂಚನೆ  ಮಾಡಿದಲ್ಲಿ  ಕೂಡಲೇ ಪೊಲೀಸ್ ಇಲಾಖೆಗೆ ವಿಚಾರವನ್ನು ತಿಳಿಸಬೇಕು ಎಂದು ತಿಳಿಸಿದರು. ವಿದ್ಯಾರ್ಥಿಗಳಿಗೆ ಸೈಬರ್ ಕಳ್ಳರಿಂದ ಜಾಗೃತರಾಗಲು ಹಲವು ಸಲಹೆ ಸೂಚನೆಗಳನ್ನು ನೀಡಿದರು.

ಗೌರವಾನ್ವಿತ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಲಕ್ಷ್ಮೀಕಾಂತ್ ಜೆ.ಮಿಸ್ಕಿನ್ ಅವರು ಮಾತನಾಡುತ್ತಾ ವಿದ್ಯಾರ್ಥಿಗಳಿಗೆ ಸಾಮಾನ್ಯ ಕಾನೂನಿನ ಕುರಿತು ಹಲವು ವಿಷಯಗಳನ್ನು ತಿಳಿಸಿಕೊಟ್ಟರು.

ಜಿಲ್ಲಾ ಸೈಬರ್ ಪೊಲೀಸ್ ಇನ್ಸೆಪೆಕ್ಟರ್ ಮಂಜು ಬಿ.ಪಿ ಅವರು ಮಾತನಾಡಿ, ಇಂದು ವೈದ್ಯರು, ಸರ್ಕಾರಿ ನೌಕರರು, ಎಂಜಿನಿಯರ್ಸ್ ಸೇರಿ ಹೆಚ್ಚು ವಿದ್ಯಾವಂತರೇ ಸೈಬರ್ ಅಪರಾಧಗಳಿಗೆ ಸಿಲುಕುತ್ತಿದ್ದಾರೆ. ಇದರಿಂದ ತಾವು ಅಂತರ್ಜಾಲದಲ್ಲಿ ವ್ಯವಹಾರ ಮಾಡುವಾಗ ಹೆಚ್ಚು ಎಚ್ಚರವಹಿಸಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಎಸ್.ಜೆ.ಸಿ.ಐ.ಟಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಜಿ.ಟಿ.ರಾಜು, ವಕೀಲ ಬಿ.ಎಚ್.ಮಂಜುನಾಥ್, ಕಾಲೇಜಿನ ಶಿಕ್ಷಕರ ವೃಂದ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments