Saturday, May 18, 2024
spot_img
HomeChikballapurಸಾಹಸ ಕಾರ್ಯಕೈಗೊಂಡು ಅಪಾಯಕ್ಕೆ ಸಿಲುಕಿದ್ದ ಚಾರಣಿಗನನ್ನು ರಕ್ಷಿಸಿದ ವಾಯು ಪಡೆ ಸಕಾಲಕ್ಕೆ ಸ್ಪಂದಿಸಿದ ಜಿಲ್ಲಾಡಳಿತ

ಸಾಹಸ ಕಾರ್ಯಕೈಗೊಂಡು ಅಪಾಯಕ್ಕೆ ಸಿಲುಕಿದ್ದ ಚಾರಣಿಗನನ್ನು ರಕ್ಷಿಸಿದ ವಾಯು ಪಡೆ ಸಕಾಲಕ್ಕೆ ಸ್ಪಂದಿಸಿದ ಜಿಲ್ಲಾಡಳಿತ

ವಾಯುಪಡೆ ಸಾಹಸ ಕಾರ್ಯಕ್ಕೆ ಕೃತಜ್ಞತೆ ತಿಳಿಸಿದ ಡಿಸಿ  ಮತ್ತು ಎಸ್ಪಿ

ಚಿಕ್ಕಬಳ್ಳಾಪುರ: ಯಲಹಂಕದ ಭಾರತೀಯ ವಾಯುಪಡೆಯ ತಂಡ ಬರದೇ ಇದ್ದಿದ್ದರೆ ನೆನ್ನೆ ಚಾರಣಕ್ಕೆ ಬಂದು ಅಪಾಯಕ್ಕೆ ಸಿಲುಕಿದ್ದ ದೆಹಲಿ ಮೂಲದ ಯುವಕ ನಿಶಾಂಕ್ (19ವರ್ಷ)ನನ್ನು ರಕ್ಷಣೆ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಪ್ರಾಣ  ಪಣಕ್ಕಿಟ್ಟು ಸಾಹಸ ಕಾರ್ಯ ಮೆರೆದ ವಾಯುಪಡೆಯ ತಂಡಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಅವರು ಹೃದಯ ಪೂರ್ವ ಧನ್ಯವಾದ ತಿಳಿಸಿದ್ದಾರೆ.

ಅವರು  ಈ  ಕುರಿತು  ಇಂದು  ಮಾತನಾಡುತ್ತಾ, ಜಿಲ್ಲಾಡಳಿತದ ಮನವಿಯ ಮೇರೆಗೆ ರಾಜ್ಯ ಮತ್ತು ರಾಷ್ಟ್ರೀಯ ನೈಸರ್ಗಿಕ ವಿಪತ್ತು ನಿರ್ವಹಣಾ  ಕೇಂದ್ರಗಳ ತಂಡ,  ಯಲಹಂಕದ ಭಾರತೀಯ ವಾಯುಪಡೆ ತಂಡ ಹಾಗೂ ಜಿಲ್ಲಾಧಿಕಾರಿಗಳ ಸಕಾಲಿಕ ಸೂಕ್ತ ಮಾರ್ಗದರ್ಶನ, ಇವರೆಲ್ಲರ ತಂಡದೋಪಾದಿಯ ಕಾರ್ಯದಿಂದ ಯುವಕನನ್ನು ರಕ್ಷಿಸಲು ಸಾಧ್ಯವಾಯಿತು. ಜೊತೆಗೆ ಏರ್ ಮಾರ್ಷಲ್ ಉದಯರವಿ ಅವರ ಅದ್ಭುತ ಸಮನ್ವಯತೆ ಹಾಗೂ ಅಪರ ಜಿಲ್ಲಾಧಿಕಾರಿ ಹೆಚ್.ಅಮರೇಶ್ ರವರ ಸಮಯೋಚಿತ ಸಹಕಾರ, ಪೊಲೀಸ್ ಉಪಾಧೀಕ್ಷಕ  ವಾಸುದೇವ್, ವೃತ್ತ ಆರಕ್ಷಕ ನಿರೀಕ್ಷಕ ಪ್ರಶಾಂತ್, ಆರಕ್ಷಕ ನಿರೀಕ್ಷಕರಾದ ಸುನಿಲ್, ವೇಣುಗೋಪಾಲ್ ಹಾಗೂ ಪೊಲೀಸ್, ಅರಣ್ಯ ಇಲಾಖೆಯ ಸಿಬ್ಬಂದಿ ಮತ್ತು ಆಗ್ನಿಶಾಮಕ ದಳದ ಕಾರ್ಯಕ್ಷಮತೆಯಿಂದ ಪ್ರಕರಣ ಸುಖಾಂತ್ಯವಾಗಿ ಯುವಕನ ಪ್ರಾಣ ರಕ್ಷಣೆ ಮಾಡಲಾಗಿದೆ  ಎಂದು  ಅವರು ತಿಳಿಸಿದರು.

ಅನುಮತಿ ರಹಿತ  ಮತ್ತು ಅಸುರಕ್ಷಿತ ಚಾರಣಿಗರಿಗೆ ಎಚ್ಚರಿಕೆ

ಜಿಲ್ಲೆಯ ವ್ಯಾಪ್ತಿಯ ಟ್ರೆಕಿಂಗ್ ಸ್ಪಾಟ್ ಗಳಲ್ಲಿ ಚಾರಣಕ್ಕೆ ಸಕ್ಷಮ ಪ್ರಾಧಿಕಾರ ಗುರುತಿಸಿರುವ ನಿಗದಿತ ಮಾರ್ಗಗಳಲ್ಲಿ ಜಿಲ್ಲಾಡಳಿತದ  ಹಾಗೂ ಸಕ್ಷಮ  ಪ್ರಾಧಿಕಾರದಿಂದ ಅನುಮತಿ ಪಡೆದು ಎಲ್ಲಾ ರೀತಿಯ  ಮುನ್ನೆಚ್ಚರಿಕಾ ಸುರಕ್ಷಾ ಕ್ರಮಗಳನ್ನು ಪಾಲಿಸಿ,  ಚಾರಣಕ್ಕೆ ಅನುಮತಿ ನೀಡಿದ ದಿನಗಳಲ್ಲಿ  ಮಾತ್ರ  ಚಾರಣ ಮಾಡಬೇಕೆ ಹೊರತು ಚಾರಣವನ್ನು ನಿಷೇಧಿಸಿದ ಸ್ಥಳಗಳಲ್ಲಿ ಮತ್ತು ನಿರ್ಬಂಧಿಸಿದ ದಿನಾಂಕಗಳಲ್ಲಿ  ಚಾರಣ (ಟ್ರೆಕ್ಕಿಂಗ್) ಮಾಡುವಂತಿಲ್ಲ. ಆ ರೀತಿ  ಅನುಮತಿ ರಹಿತ ಮತ್ತು ಅಸುರಕ್ಷಿತ ಚಾರಣ ಕೈಗೊಂಡು ಇಂತಹ ಅವಘಡಗಳಿಗೆ ಆಸ್ಪದ ನೀಡಬಾರದು ಎಂದು ಎಚ್ಚರಿಕೆ ನೀಡಿದರು.

ಏನಿದು ಘಟನೆ

ನಂದಿಬೆಟ್ಟದಲ್ಲಿ ಭಾನುವಾರ ಟ್ರೆಕಿಂಗ್ ವೇಳೆ ಬೆಟ್ಟ ಏರುವಾಗ ‘ಆಯತಪ್ಪಿ ಬಿದ್ದಿದ್ದ ದೆಹಲಿ ಮೂಲದ ನಿಶಾಂಕ್ ಅವರನ್ನು  ಜಿಲ್ಲಾಡಳಿತದ ಸಕಾಲಿಕ ಯುಕ್ತಕಾಳಜಿ ಹಾಗೂ ಸ್ಪಂದನೆಯಿಂದ  ಯಲಹಂಕದ ಭಾರತೀಯ ವಾಯು ಪಡೆ ತಂಡ  ಮೂರಾಲ್ಕು ಗಂಟೆಗಳ ಕಾರ್ಯಾಚರಣೆ ನಡೆಸಿ ರಕ್ಷಿಸಿದೆ.

ಯಲಹಂಕದ ಭಾರತೀಯ ವಾಯು ಪಡೆಯ ಸಿಬ್ಬಂದಿ ಹೆಲಿಕಾಪ್ಟರ್‌ ಮೂಲಕ ನಿಶಾಂಕ್‌ರನ್ನು ರಕ್ಷಿಸಿ, ಸುರಕ್ಷಿತವಾಗಿ ಕರೆತಂದಿದೆ. ನೆನ್ನೆ (ಭಾನುವಾರ) ಮಧ್ಯಾಹ್ನದಿಂದಲೇ ರಾಜ್ಯ ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ, ಜಿಲ್ಲಾಡಳಿತದ ಅಧಿಕಾರಿಗಳು, ಅರಣ್ಯ ಇಲಾಖೆ ಹಾಗೂ ಪೋಲೀಸರು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದರು. ಅಲ್ಪ ಪ್ರಮಾಣದ ತರಚಿದ ಗಾಯಗಳಿಂದ ಬಳಲಿದ ಯುವಕನನ್ನು ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿಕಿತ್ಸೆ ನೀಡಲಾಗಿದ್ದು, ಒಟ್ಟಾರೆ ಪ್ರಕರಣ ಸುಖಾಂತ್ಯವಾಗಿದೆ.

ನಿಶಾಂಕ್, ಬೆಂಗಳೂರಿನ ಪಿ.ಇಎ.ಸ್ ಕಾಲೇಜಿನಲ್ಲಿ ಮೊದಲ ವರ್ಷದ ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದು, ಅವರು ಭಾನುವಾರ ಬೆಳಿಗ್ಗೆ ಬೈಕ್‌ನಲ್ಲಿ ನಂದಿಬೆಟ್ಟಕ್ಕೆ ಬಂದು ಬೆಟ್ಟದ ಚೆಕ್‌ಪೋಸ್ಟ್ ಬಳಿ ಬೈಕ್ ನಿಲ್ಲಿಸಿ, ಬ್ರಹ್ಮಗಿರಿ ಬೆಟ್ಟದ ಮೂಲಕ ನಂದಿಬೆಟ್ಟ ಏರಲು ಮುಂದಾಗಿದ್ದ. ಬೆಟ್ಟ ಏರಿದ್ದ ನಿಶಾಂಕ್, ಅಯತಪ್ಪಿ ಸುಮಾರು 250 ಅಡಿ ಕೆಳಕ್ಕೆ ಉರುಳಿ ಬಿಳುವ   ವೇಳೆ ಬೆಟ್ಟಗಳ ನಡುವಿನ ಪೊಟರೆಯಲ್ಲಿ ದೊರೆತ ಅಧಾರಹಿಡಿದು ನಿಂತಿದ್ದರು. ಕಲ್ಲಿನ ಪೊಟರೆಯಲ್ಲಿ ಸಿಲುಕಿದ್ದ ನಿಶಾಂಕ್ ಅಲ್ಲಿಂದಲೇ ದೆಹಲಿಯಲ್ಲಿರುವ ತಮ್ಮ ಪೋಷಕರಿಗೆ ಮೊಬೈಲ್ ಮೂಲಕ ಕರೆ ಮಾಡಿ ಮಧ್ಯಾಹ್ನನದ ವೇಳೆಗೆ ವಿಷಯ ತಿಳಿಸಿದ್ದಾನೆ. ಪೋಷಕರು ಕರ್ನಾಟಕ ಸರ್ಕಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಯವರಿಗೆ ವಿಷಯ ತಿಳಿಸಿ, ಮಗನನ್ನು ರಕ್ಷಿಸುವಂತೆ ಕೋರಿದ್ದರು.

ತ್ವರಿತ ರಕ್ಷಣೆಗೆ ಮುಂದಾದ ಜಿಲ್ಲಾಧಿಕಾರಿ

ವಿಷಯ ತಿಳಿದ ಜಿಲ್ಲಾಧಿಕಾರಿಗಳು ಕೂಡಲೇ ಅಪಾಯಕ್ಕೆ ಸಿಲುಕಿದ್ದ ಯುವಕನ ರಕ್ಷಣಾ ಕಾರ್ಯಕ್ಕೆ ಮುಂದಾಗಲು ಪೊಲೀಸ್ ಇಲಾಖೆಗೆ ಆದೇಶ ನೀಡಿದರು. ಮಾಹಿತಿ ಪಡೆದ ಚಿಕ್ಕಬಳ್ಳಾಪುರ ಜಿಲ್ಲೆಯ ಪೊಲೀಸರು, ಅರಣ್ಯ ಇಲಾಖೆ ಸಿಬ್ಬಂದಿ, ರಾಜ್ಯ ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡದ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ನಡೆಸಿದರು. ಆರಂಭದಲ್ಲಿ ಬಿದ್ದವರು ಯಾರು ಎನ್ನುವ ಮಾಹಿತಿ ಅಧಿಕಾರಿಗಳಿಗೂ ಸ್ಪಷ್ಟವಾಗಿ ದೊರೆಯಲಿಲ್ಲ. ಮೊದಲಿಗೆ ನಿಶಾಂಕ್ ಸಿಲುಕಿದ್ದ ಸ್ಥಳವನ್ನು ಗುರುತಿಸಿ ಅಲ್ಲಿಗೆ ತೆರಳಲು ರಕ್ಷಣಾ ಸಿಬ್ಬಂದಿ ಪ್ರಯತ್ನಪಟ್ಟರು.  ಆ ಜಾಗಕ್ಕೆ ಹಗ್ಗವನ್ನು ಕಟ್ಟಿ ಬೆಟ್ಟದಿಂದ ಕೆಳಕ್ಕೆ ಇಳಿಯಲು ಪ್ರಯತ್ನಿಸಿದರು. ಆದರೆ ನಿಶಾಂಕ್ ಇದ್ದ ಪ್ರದೇಶ ತೀರಾ ಕಡಿದಾಗಿತ್ತು. ಯುವಕ ಅಲ್ಲಿಂದ ಜಾರಿದರೂ ಮತ್ತೆ 300 ಅಡಿ ಕೆಳಕ್ಕೆ ಬೀಳುವ ಅಪಾಯದ ಸಾಧ್ಯತೆ ಇದೆ ಎಂಬ ಮಾಹಿತಿಯನ್ನು ಪೊಲೀಸ್ ಇಲಾಖೆಯಿಂದ ಪಡೆದ ಜಿಲ್ಲಾಧಿಕಾರಿ ಆರ್. ಲತಾ  ಅವರು  ಸಂಜೆ 4:15ಕ್ಕೆ ಯಲಹಂಕದಲ್ಲಿರುವ ಭಾರತೀಯ ವಾಯು ಪಡೆಗೆ ಮನವಿ ಮಾಡಿ, ಯುವಕನನ್ನು ರಕ್ಷಣೆ ಮಾಡುವಂತೆ ಕೋರಿದ್ದರು.

ತಕ್ಷಣವೇ ಎಂ.ಐ 70 ಹೆಲಿಕಾಪ್ಟರ್ ಮೂಲಕ ಸ್ಥಳಕ್ಕೆ ದಾವಿಸಿದ ವಾಯು ಪಡೆಯ ರಕ್ಷಣಾ ತಂಡ ಸ್ಥಳೀಯ ಪೊಲೀಸರ ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿ ನೆರವಿನಿಂದ ನಿಶಾಂಕ್ ಸಿಲುಕಿಕೊಂಡಿದ್ದ ಜಾಗಕ್ಕೆ ಹೆಲಿಕಾಪ್ಟರ್ ನಿಂದ ರಕ್ಷಣಾ ಸಿಬ್ಬಂದಿಯನ್ನು ಕೆಳಗಿಳಿಸಿ ಹಗ್ಗದ ಸಹಾಯದಿಂದ ಯುವಕನನ್ನು ಮೇಲೆತ್ತಲು ಸಂಜೆ 5 ಗಂಟೆ ವೇಳೆಗೆ ಯಶಸ್ವಿಯಾಯಿತು, ಆ ನಂತರ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಯಿತು.

ಕೃತಜ್ಞತೆ ತಿಳಿಸಿದ ಜಿಲ್ಲಾಧಿಕಾರಿ

ನೆನ್ನೆ (ಭಾನುವಾರ) ನಂದಿಬೆಟ್ಟದಲ್ಲಿ  ಸುಮಾರು 150 ರಿಂದ 300 ಅಡಿ ಆಳದ  ಪ್ರಪಾತಕ್ಕೆ  ಕಾಲು ಜಾರಿಬಿದ್ದು, ಚಲಿಸಲಾಗದ ಸ್ಥಿತಿಯಲ್ಲಿ ಸಿಲುಕಿದ್ದ ಯುವಕನನ್ನು ಮೇಲೆತ್ತಲು ನೆರವಿಗೆ ಬಂದಿದ್ದ ಹೆಲಿಕಾಪ್ಟರ್ ಪೈಲೆಟ್ ಹಾಗೂ ವಾಯು ಪಡೆಯ ರಕ್ಷಣಾ ತಂಡದ ಸಕಾಲಿಕ ಕಾರ್ಯಕ್ಷಮತೆ ಹಾಗೂ ಪ್ರಾಣದ ಹಂಗನ್ನು ತೊರೆದು ಯುವಕನನ್ನು ರಕ್ಷಣೆ ಮಾಡಿ ಮಾನವೀಯತೆ ಹಾಗೂ ಸಾಹಸ ಮೆರೆದ ವಾಯು ಪಡೆಯ ತಂಡದ ಎಲ್ಲರಿಗೆ ಹಾಗೂ ಸಹಕಾರ ನೀಡಿದ ರಾಷ್ಟ್ರೀಯ ಮತ್ತು ರಾಜ್ಯ ಸೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರದ ತಂಡಕ್ಕೆ ಜಿಲ್ಲಾಧಿಕಾರಿಗಳು ಕೃತಜ್ಞತೆ ತಿಳಿಸಿದರು ಹಾಗೂ ಕಾಲೋಚಿತ ಸಾಹಸ ಕಾರ್ಯ ಮೆರೆದ ಪೊಲೀಸ್, ಕಂದಾಯ, ಅರಣ್ಯ ಮತ್ತು ಆರೋಗ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗೆ  ಧನ್ಯವಾದವನ್ನು ತಿಳಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments