Monday, May 6, 2024
spot_img
HomeChikballapurರಾಜ್ಯದಲ್ಲಿ ಒಂದೇ ದಿನ 3.5 ಲಕ್ಷ ಕೋವ್ಯಾಕ್ಸಿನ್ ಲಸಿಕೆ15 ರಿಂದ 18 ವರ್ಷದೊಳಗಿನ ಮಕ್ಕಳಿಗೆ ಕೋವಿಡ್...

ರಾಜ್ಯದಲ್ಲಿ ಒಂದೇ ದಿನ 3.5 ಲಕ್ಷ ಕೋವ್ಯಾಕ್ಸಿನ್ ಲಸಿಕೆ15 ರಿಂದ 18 ವರ್ಷದೊಳಗಿನ ಮಕ್ಕಳಿಗೆ ಕೋವಿಡ್ ಲಸಿಕಾ ಮೇಳ ಆರೋಗ್ಯ ಸಚಿವ ಸುಧಾಕರ್ ಚಾಲನೆ

ಚಿಕ್ಕಬಳ್ಳಾಪುರ: ರಾಜ್ಯದಲ್ಲಿಯೂ 15 ರಿಂದ 18 ವರ್ಷದೊಳಗಿನ ಮಕ್ಕಳಿಗೆ ಕೊರೊನಾ ಲಸಿಕೆ ನೀಡಲಾಗುತ್ತಿದೆ. ನಿನ್ನೆ ಒಂದೇ ದಿನ ಮೂರುವರೆ ಲಕ್ಷ ಮಕ್ಕಳಿಗೆ ಕೋವ್ಯಾಕ್ಸಿನ್ ಲಸಿಕೆಯನ್ನು ಮೊದಲ ಡೋಸ್ ಆಗಿ ನೀಡಲಾಗಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.

ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಇಂದು ಚಿಕ್ಕಬಳ್ಳಾಪುರ ನಗರದ ಸರ್ಕಾರಿ ಜೂನಿಯರ್ ಕಾಲೇಜಿನಲ್ಲಿ ಜಿಲ್ಲಾಡಳಿತ ಹಮ್ಮಿಕೊಂಡಿದ್ದ 15 ರಿಂದ 18 ವರ್ಷದೊಳಗಿನ ಮಕ್ಕಳ ಯುವ ಕೋವಿಡ್ ಲಸಿಕಾ ಮೇಳವನ್ನು ಉದ್ಘಾಟಿಸಿ ಮಾತನಾಡಿ ಕಳೆದ ಎರಡು ಅಲೆಗಳನ್ನು ಸರ್ಕಾರ ಸಾರ್ವಜನಿಕರ ಸಹಕಾರದೊಂದಿಗೆ ಸಮರ್ಥವಾಗಿ ಎದುರಿಸಿದೆ. ಮೂರನೇ ಅಲೆಯಲ್ಲಿ ಬಂದಿದೆ ಎನ್ನಲಾದ ಕೋವಿಡ್ ನ ರೂಪಾಂತರಿ ಪ್ರಬೇಧ ಒಮೈಕ್ರಾನ್ ವೇಗವಾಗಿ ಹರಡುತ್ತಿದೆ. ಅದರಲ್ಲೂ ರಾಜಧಾನಿ ಬೆಂಗಳೂರಿನಲ್ಲಿ ನೆನ್ನೆ ಒಂದೇ ದಿನ ಮೂರು ಸಾವಿರ ಕೋವಿಡ್ ಪ್ರಕರಣಗಳು ವರದಿಯಾಗಿವೆ. ಬೆಂಗಳೂರು ಮಹಾನಗರದಲ್ಲಿ ಜನಸಾಂದ್ರತೆ ಅಧಿಕವಾಗಿರುವುದರಿಂದ ಮತ್ತು ವಿದೇಶಗಳಿಂದ ಮತ್ತು ಹೊರರಾಜ್ಯಗಳಿಂದ ಜನರು ನೇರವಾಗಿ ಬೆಂಗಳೂರಿಗೆ ಬರುವುದರಿಂದ ಈ ಸೋಂಕು ರಾಜಧಾನಿಯಲ್ಲಿ ವೇಗವಾಗಿ ಹರಡಲು ಕಾರಣಗಳಾಗಿವೆ. ಆದ್ದರಿಂದಲೇ ಬೆಂಗಳೂರು ನಗರದ ಮೇಲೆ ಹೆಚ್ಚು ಗಮನವನ್ನು ಕೇಂದ್ರೀಕರಿಸಿ ಬೆಂಗಳೂರಿಗೇ ಪ್ರತ್ಯೇಕ ಕೋವಿಡ್ ನಿಯಂತ್ರಣ ಮಾರ್ಗಸೂಚಿಯನ್ನು ಬಿಡುಗಡೆ ಮಾಡಲಾಗಿದೆ.ಅಲ್ಲಿ 1 ರಿಂದ 9 ನೇ ತರಗತಿವರೆಗಿನ ಎಲ್ಲಾ ಶಾಲೆಗಳಿಗೆ ರಜೆ ಘೋಷಿಸಲಾಗಿದೆ ಎಂದು ತಿಳಿಸಿದರು.

ಮುಂದುವರೆದು ಮಾತನಾಡಿದ ಅವರು ಈ ಮೂರನೇ ಅಲೆ ಕೊನೆಯ ಅಲೆಯೂ ಆಗುವ ಸಾಧ್ಯತೆಗಳಿವೆ ಎಂದು ರಾಜ್ಯ ಮಟ್ಟದ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ವರದಿ ನೀಡಿದೆ. ಅನೇಕ ತಜ್ಞರೂ ಇದೇ ಅಭಿಪ್ರಾಯವನ್ನು ನೀಡಿದ್ದು, ಇನ್ನು ಒಂದೂವರೆ ತಿಂಗಳಲ್ಲಿ ಮೂರನೇ ಅಲೆ ಕೊನೆಗೊಳ್ಳುವ ಸಾಧ್ಯತೆಗಳಿವೆ. ಇದನ್ನು ತಾಂತ್ರಿಕ ಸಲಹಾ ಸಮಿತಿ ಪುಷ್ಟೀಕರಿಸಿದ್ದು, ತಜ್ಞರೂ ಈ ಬಗ್ಗೆ ಸಹಮತ ವ್ಯಕ್ತಪಡಿಸಿದ್ದಾರೆ. ಆದರೆ, ಯಾವುದೇ ಕಾರಣಕ್ಕೂ ಮೈಮರೆಯುವ ಪ್ರಶ್ನೆಯೇ ಇಲ್ಲ. ಮಾಸ್ಕ್ ಧರಿಸುವುದು ಕಡ್ಡಾಯ. ವ್ಯಕ್ತಿಗತ ಅಂತರ ಮತ್ತು ಸ್ವಚ್ಛತೆಗೆ ಆದ್ಯತೆ ನೀಡುವ ಜೊತೆಗೆ ಸೋಂಕು ನಿವಾರಕ ದ್ರವ ಬಳಕೆಯನ್ನು ಮುಂದುವರೆಸಬೇಕು. ಇದರಲ್ಲಿ ರಾಜಿಯಿಲ್ಲ ಎಂದು ಸ್ಪಷ್ಟಪಡಿಸಿದರು.

ಲಸಿಕಾ ಮೇಳ ಕಾರ್ಯಕ್ರಮದ ನಂತರ ನೇರವಾಗಿ ನಗರದ ಒಕ್ಕಲಿಗರ ಕಲ್ಯಾಣ ಮಂಟಪಕ್ಕೆ ತೆರಳಿದ ಸಚಿವರು ಜಿಲ್ಲಾಡಳಿತ ಆಯೊಜಿಸಿದ್ದ ಪರಿಹಾರ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ, ಕೋವಿಡ್ ನಿಂದ ಮೃತಪಟ್ಟ ಬಡತನ ರೇಖೆಗಿಂತ ಕೆಳಗಿರುವ 58 ಕುಟುಂಬಗಳಿಗೆ ಚೆಕ್ ವಿತರಣೆ ಮತ್ತು ಅತಿವೃಷ್ಟಿ/ ಪ್ರವಾಹದಿಂದ ಹಾನಿಯಾದ ಕುಟುಂಬಗಳಿಗೆ ಪರಿಹಾರ ಧನ ಮಂಜೂರಾತಿ ಪತ್ರಗಳನ್ನು ವಿತರಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಮಾವು ಮತ್ತು ಮಾರುಕಟ್ಟೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಕೆ.ವಿ.ನಾಗರಾಜು, ಜಿಲ್ಲಾಧಿಕಾರಿ ಆರ್.ಲತಾ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ. ಶಿವಶಂಕರ್,ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಜಿ.ಕೆ ಮಿಥುನ್ ಕುಮಾರ್, ನಗರಸಭೆ ಅಧ್ಯಕ್ಷ ಆನಂದ್ ರೆಡ್ಡಿ ಬಾಬು, ಜಿಲ್ಲಾ ಆರೋಗ್ಯಾಧಿಕಾರಿ ಇಂದಿರಾ ಆರ್ ಕಬಾಡೆ,ತಹಸಿಲ್ದಾರ್ ಗಣಪತಿಶಾಸ್ತ್ರಿ ಹಾಜರಿದ್ದರು

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments