Friday, April 26, 2024
spot_img
HomeUncategorizedಕಾವೇರಿ ಕೂಗು ಅಭಿಯಾನದ ಯಶಸ್ಸು ಭಾರತದಾದ್ಯಂತ ಹರಡಬೇಕು: ಜೂಹಿ ಚಾವ್ಲಾ

ಕಾವೇರಿ ಕೂಗು ಅಭಿಯಾನದ ಯಶಸ್ಸು ಭಾರತದಾದ್ಯಂತ ಹರಡಬೇಕು: ಜೂಹಿ ಚಾವ್ಲಾ

“ಕಾವೇರಿ ಕೂಗು ಅಭಿಯಾನದ ಸಹಾಯದಿಂದ 1,25,000 ರೈತರು ಮರ ಆಧಾರಿತ ಕೃಷಿ ಪದ್ದತಿಗೆ ಬದಲಾಗಿದ್ದಾರೆ. ಅವರ ಆದಾಯ ಮತ್ತು ಇಳುವರಿ ಬಹಳಷ್ಟು ಹೆಚ್ಚಾಗಿದೆ. ಈ ಯಶಸ್ಸು ಭಾರತದಾದ್ಯಂತ ಹರಡಬೇಕು” ಎಂದು ಖ್ಯಾತ ಹಿಂದಿ ಚಿತ್ರರಂಗದ ನಟಿ ಜೂಹಿ ಚಾವ್ಲಾ ರವರು ತಮಿಳು ನಾಡಿನ ರೈತರೊಂದಿಗೆ ನಡೆಸಿದ ಸಂವಾದದ ನಂತರ ಹೇಳಿದ್ದಾರೆ.

1 ಫೆಬ್ರವರಿ 2022: ಕಾವೇರಿ ನದಿಯ ಪುನರುಜ್ಜೀವನಗೊಳಿಸುವ ಮಹತ್ವಾಕಾಂಕ್ಷೆಯುಳ್ಳ “ಕಾವೇರಿ ಕೂಗು” ಅಭಿಯಾನಕ್ಕೆ ತಮ್ಮ ಬದ್ಧತೆಯನ್ನು ಎತ್ತಿ ಹಿಡಿಯುತ್ತಾ, ಖ್ಯಾತ ಚಿತ್ರನಟಿ ಜೂಹಿ ಚಾವ್ಲಾ ರವರು ಅದರ ನಿಜವಾದ ಪ್ರಭಾವವನ್ನು ಅರ್ಥಮಾಡಿಕೊಳ್ಳಲು ತಮಿಳು ನಾಡಿನ ಈರೋಡ್ ಜಿಲ್ಲೆಯಲ್ಲಿ ರೈತರನ್ನು ಭೇಟಿಯಾದರು. ಚಾವ್ಲಾ ಅವರು ಈರೋಡಿಗೆ ಇಂದು ಆಗಮಿಸಿ ಗೋಬಿಚೆಟ್ಟಿಪಾಲಯಂ ಮೇವಾಣಿ ಎಂಬ ಗ್ರಾಮಕ್ಕೆ ತೆರಳಿದರು. ಅಲ್ಲಿ ಅವರನ್ನು ಶ್ರೀ ಸೆಂಥಿಲ್ ಕುಮಾರ್ ತಮ್ಮ ಜಮೀನಿನಲ್ಲಿ ಸತ್ಕರಿಸಿದರು. ಸೆಂಥಿಲ್ ಕುಮಾರ್ ಮರ ಆಧಾರಿತ ಕೃಷಿ ಪದ್ದತಿಯನ್ನು ಬಹಳ ಹಿಂದೆಯೇ ಅಳವಡಿಸಿಕೊಂಡವರು ಮತ್ತು ಈ ಅಭಿಯಾನಕ್ಕೆ ಬಹಳ ಉತ್ಸುಕರಾಗಿ ಬೆಂಬಲ ನೀಡುತ್ತಿದ್ದಾರೆ. ಆ ಸಂದರ್ಭದಲ್ಲಿ ನೆರೆದ ರೈತರು ತಮ್ಮ ಬದುಕಿನಲ್ಲಿ ಮತ್ತು ಪರಿಸರದಲ್ಲಿ, ಮರ ಆಧಾರಿತ ಕೃಷಿ ಪದ್ದತಿಯಿಂದ ಆದ ಬದಲಾವಣೆಗಳ ಕುರಿತು ಮಾತನಾಡಿದರು.

ಚಾವ್ಲಾ ಅವರು ಈ ವಿಷಯದ ಕುರಿತು ಬಹಳ ಮಗ್ನರಾಗಿ ಕೇಳುತ್ತಿದ್ದರು ಮತ್ತು ಈ ಕೃಷಿ ಪದ್ದತಿಯ ಮಹತ್ತರ ಪ್ರಭಾವವನ್ನು ನೋಡಿ ಬಹಳ ಹರ್ಷಗೊಂಡರು. “ಇಲ್ಲಿ ಬರುವ ಮೊದಲು ನನಗೆ ಈ ಯೋಜನೆಯಡಿಯಲ್ಲಿ ಕೇವಲ ಎಷ್ಟು ಸಸಿಗಳನ್ನು ನೆಟ್ಟಿದ್ದಾರೆ ಎಂಬ ಸಂಖ್ಯೆ ಮಾತ್ರ ತಿಳಿದಿತ್ತು. ಆದರೆ ರೈತರೊಂದಿಗೆ ಮಾತನಾಡಿದ ಮೇಲೆ ಇದರಿಂದ ಅವರ ಬದುಕಿನಲ್ಲಿ ಮತ್ತು ಪರಿಸರದಲ್ಲಿ ಆಗಿರುವ ಅನೇಕಾನೇಕ ಬದಲಾವಣೆಗಳ ಬಗ್ಗೆ ಅರಿತುಕೊಂಡೆ. ಇದರಲ್ಲಿ ಅನೇಕ ವಿಷಯಗಳು ನನಗೆ ಆಶ್ಚರ್ಯ ಮತ್ತು ಹರ್ಷವನ್ನುಂಟುಮಾಡಿತು”, ಎಂದು ಅವರು ಅಲ್ಲಿ ನೆರೆದಿದ್ದ ವರದಿಗಾರರಿಗೆ ಹೇಳಿದರು.

ಭಾರತದಲ್ಲಿ ಬರಿದಾಗುತ್ತಿರುವ ನದಿಗಳ ಪುನರುಜ್ಜೀವನಗೊಳಿಸಿ, ರೈತರಿಗೆ ಅಭಿವೃದ್ಧಿ ಮತ್ತು ಯಶಸ್ಸನ್ನು ನೀಡುವ ಈ ಅಭಿಯಾನವು ಸಂಬಂಧವಾಗಿ ಚಾವ್ಲಾ ಅವರು ತಮ್ಮ ಬೆಂಬಲವನ್ನು ನಿರಂತವಾಗಿ ನೀಡುತ್ತಾ ಬಂದಿದ್ದಾರೆ.

“ಬರ ಅಥವಾ ವೈಯಕ್ತಿಕ ಸಮಸ್ಯೆಗಳಿಂದ ಪಾರಾಗಲು ತಮ್ಮ ಜಮೀನುಗಳನ್ನು ಮಾರಲು ನಿಶ್ಚಯಿಸಿದ್ದ ಅನೇಕ ರೈತರು ಕಾವೇರಿ ಕೂಗು ಅಭಿಯಾನದ ಕಾರಣದಿಂದ ಮರ ಆಧಾರಿತ ಕೃಷಿ ಪದ್ದತಿಯನ್ನು ಅಳವಡಿಸಿಕೊಂಡಿದ್ದಾರೆ. ಅವರಿಗೆ ಹೊಸ ಭರವಸೆ ಮೂಡಿದಂತಾಗಿದೆ. ಅವರ ಆದಾಯ ಮತ್ತು ಇಳುವರಿ ಬಹಳಷ್ಟು ಹೆಚ್ಚಾಗಿದೆ ಎಂದು ತಿಳಿದು ನನಗೆ ಸಂತೋಷವಾಯಿತು. ಅವರ ಆರ್ಥಿಕ ಸ್ಥಿತಿಯೊಂದಿಗೆ ಮಣ್ಣಿನ ಫಲವತ್ತತೆಯೂ ಹೆಚ್ಚಾಗಿದೆ ಎಂದು ಅವರು ನನಗೆ ಹೇಳಿದರು” ಎಂದು ಮರ ಬೇಸಾಯ ಪದ್ದತಿಯಿಂದ ಆದ ಪರಿಸರ ಹಾಗು ಅವರ ಜೀವನದ ಪರಿವರ್ತನೆಯನ್ನು ತಿಳಿಸಿದ ಅನೇಕ ರೈತರೊಂದಿಗೆ ಚಾವ್ಲಾ ಅವರು ಮಾತನಾಡಿ ಹೀಗೆ ಹೇಳಿದರು.

ಜೂಹಿಯವರು ಈ ಅಭಿಯಾನದ ರೂವಾರಿಯಾದ ಸದ್ಗುರು ಅವರಿಗೆ ಧನ್ಯವಾದ ತಿಳಿಸಿ, ಈ ಅಭಿಯಾನದಿಂದಾದ ಮಹತ್ತರ ಪರಿಣಾಮವನ್ನು ನೋಡಿ ಸದ್ಗುರು ಅವರ ಕುರಿತು ಇದ್ದ ಗೌರವ ಇನ್ನೂ ಹೆಚ್ಚಾಯಿತು ಎಂದು ಹೇಳಿದರು. “ಈ ಅದ್ಭುತವಾದ ಪರಿವರ್ತನೆ ತಂದಿರುವ ಸದ್ಗುರುಗಳಿಗೆ ಹಾಗೂ ಈಶಾ ಸ್ವಯಂಸೇವಕರಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು. ಈ ರೈತರ ಬದುಕಿನಲ್ಲಿ ಆಗಿರುವ ಪರಿವರ್ತನೆಯನ್ನು ಕಂಡು ನನಗೆ ಸದ್ಗುರುಗಳ ಮೇಲೆ ಇದ್ದ ಗೌರವ ಮತ್ತಷ್ಟು ಹೆಚ್ಚಾಗಿದೆ”.

ಜೂಹಿಯವರು ಒಂದು ಲಕ್ಷ ಮರಗಳಿಗೆ ಬೇಕಾಗಿರುವ ಹಣ ಸಂಗ್ರಹಿಸಲು ಬದ್ಧತೆ ತೋರಿದ್ದಾರೆ ಮತ್ತು ವಿಶೇಷ ಸಂದರ್ಭಗಳಲ್ಲಿ ತಮ್ಮ ಬಂಧು ಬಾಂಧವರಿಗೆ, ಸ್ನೇಹಿತರಿಗೆ ಮತ್ತು ಸಹೋದ್ಯೋಗಿಗಳಿಗೆ ಸಸಿಗಳನ್ನು ಕೊಡುಗೆ ನೀಡುತ್ತಿದ್ದಾರೆ. “ಸದ್ಗುರು ಅವರು ಕೈಗೊಂಡಿರುವ ಈ ಮಹತ್ತರ ಅಭಿಯಾನದಲ್ಲಿ ಪಾಲ್ಗೊಳ್ಳಲು ನನ್ನ ಅಳಿಲು ಸೇವೆಯನ್ನು ಮೊದಲಿನಿಂದಲೇ ಮಾಡುತ್ತಾ ಬಂದಿದ್ದೇನೆ. ಚಲನಚಿತ್ರ ಉದ್ಯಮದ ನನ್ನ ಮಿತ್ರರ ಹುಟ್ಟುಹಬ್ಬದ ದಿನದಂದು 500 – 1000 ಸಸಿಗಳನ್ನು ಕೊಡುಗೆ ನೀಡುತ್ತಿದ್ದೇನೆ”. ಅವರು ಶಾರುಖ್ ಖಾನ್, ರಿಷಿ ಕಪೂರ್, ಅಯುಷ್ಮಾನ್ ಖುರಾನಾ, ಹೃತಿಕ್ ರೋಷನ್, ರಾಕೇಶ್ ರೋಷನ್, ಹಾಡುಗಾರರಾದ ಆಶಾ ಬೋನ್ಸ್ಲೆ, ಲತಾ ಮಂಗೇಶ್ಕರ್ ಮತ್ತು ನಿರ್ಮಾಪಕರಾದ ಅನುಪಮ್ ಖೇರ್ ಮತ್ತು ಯಶ್ ಚೋಪ್ರಾ ಅವರ ಹುಟ್ಟು ಹಬ್ಬದಂದು ಸಸಿಗಳನ್ನು ಉಡುಗೊರೆಯಾಗಿ ನೀಡಿದ್ದಾರೆ.

ಅವರು ಈ ಯೋಜನೆಯ ಕುರಿತು ಅಂತರ್ಜಾಲದಲ್ಲಿಯೂ ಸಕ್ರಿಯರಾಗಿದ್ದಾರೆ. “ನಾನು ನನ್ನ ಇನ್ಸ್ಟಾಗ್ರಾಮ್ ಮತ್ತು ಟ್ವಿಟ್ಟರ್ ನಲ್ಲಿ ಕಾವೇರಿ ಕೂಗು ಅಭಿಯಾನದ ಕುರಿತು ಬರೆಯುತ್ತಿರುತ್ತೇನೆ. ಇದರಿಂದ ಚಲನಚಿತ್ರ ಉದ್ಯಮದಲ್ಲಿಯೂ ಇದರ ಕುರಿತು ಸಾಕಷ್ಟು ಅರಿವು ಮೂಡಿದೆ” ಎಂದು ಅವರು ಹೇಳಿದರು. ಅವರ ಪ್ರಯತ್ನದಿಂದ ಕಾವೇರಿ ಜಲಾಯನ ಪ್ರದೇಶದಲ್ಲಿ 80,000 ಮರಗಳನ್ನು ನೆಡಲು ಸಾಧ್ಯವಾಗಿದೆ.

ಅವರು ತಮ್ಮ ಹುಟ್ಟುಹಬ್ಬದಂದು ಮರಗಳನ್ನು ನೆಡಲು ನೆರವಾಗಲು ತಮ್ಮ ಮಿತ್ರರಿಗೂ ವಿನಂತಿಸಿಕೊಂಡಿದ್ದಾರೆ. “ನನ್ನ ಹಿಂದಿನ ವರ್ಷದ ಹುಟ್ಟಹಬ್ಬದಂದು ನಾನೊಂದು ಮನವಿ ಮಾಡಿದೆ: ‘ನನ್ನ ಹುಟ್ಟುಹಬ್ಬಕ್ಕೆ ಉಡುಗೊರೆಯಾಗಿ ಮರಗಳನ್ನು ನೆಡಿ, ಬೇರೆ ಇನ್ನಾವುದೇ ಉಡುಗೊರೆ ಕೊಡಬೇಡಿ’ ಎಂದು. ಆಶ್ಚರ್ಯಕರವಾಗಿ, ನನ್ನ ಮಿತ್ರರು ಮತ್ತು ಅಭಿಮಾನಿಗಳು 30,000 ಸಸಿಗಳನ್ನು ನೆಡುವುದಕ್ಕೆ ಹಣಗೂಡಿಸಿದರು ಮತ್ತು ಇದರಿಂದ ನನಗೆ ಬಹಳ ಸಂತೋಷವಾಯಿತು. ಇದರೊಂದಿಗೆ ಕಾವೇರಿ ಕೂಗಿಗಾಗಿ 1,00,000 ಸಸಿಗಳನ್ನು ನೆಡುವುದಕ್ಕೆ ಹಣಗೂಡಿಸುವ ನನ್ನ ಗುರಿಯು ಸಾಕಾರಗೊಳ್ಳುವಂತಿದೆ”, ಎಂದು ಉತ್ಸಾಹದಿಂದ ಜೂಹಿಯವರು ಹೇಳಿದರು.

ಸೆಂಥಿಲ್ ಕುಮಾರ್ ಅವರ ಜಮೀನಿನಲ್ಲಿ ನಡೆದ ಈ ಸಮಾರಂಭದಲ್ಲಿ ಸುತ್ತಮುತ್ತಲಿನ ಅನೇಕ ರೈತರು ತಮ್ಮ ಕುಟುಂಬದೊಂದಿಗೆ ಪಾಲ್ಗೊಂಡರು. ರೈತರೊಂದಿಗೆ ಮಾತುಕತೆಯಾಡಿದ ನಂತರ ಜೂಹಿಯವರು ಅವರೊಂದಿಗೆ ಮಧ್ಯಾಹ್ನದ ಊಟಕ್ಕೆ ಕುಳಿತರು.  

ಕಾವೇರಿ ಕೂಗು ಅಭಿಯಾನದಡಿಯಲ್ಲಿ ಕಳೆದ ಎರಡು ವರ್ಷಗಳಿಂದ ತಮಿಳು ನಾಡು ಮತ್ತು ಕರ್ನಾಟಕದ ರೈತರು 2.1 ಕೋಟಿ ಸಸಿಗಳನ್ನು ತಮ್ಮ ಜಮೀನುಗಳಲ್ಲಿ ನೆಟ್ಟಿದ್ದಾರೆ. ಅಗಾಧವಾದ ಆರ್ಥಿಕ ಲಾಭವಿರುವ ಮತ್ತು ಪರಿಸರಕ್ಕೆ ಹಿತಕರವಾದ ಈ ಮರ ಆಧಾರಿತ ಕೃಷಿ ಪದ್ದತಿಯನ್ನು 1,25,000 ರೈತರು ಅಳವಡಿಸಿಕೊಂಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments