ಪಾಲಾರ್ ಪತ್ರಿಕೆ | Palar Patrike
ಲಕ್ಷ್ಮೀಕಾಂತ ರಾಜು ತುಮಕೂರು : ಜಿಲ್ಲೆಯ ಜಿಲ್ಲಾ ಮಟ್ಟದ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ತಮ್ಮ ಕೇಂದ್ರ ಸ್ಥಾನದಲ್ಲಿಯೇ ಉಳಿದುಕೊಂಡು ಕಾರ್ಯನಿರ್ವಹಿಸಬೇಕು. ಕೇಂದ್ರ ಸ್ಥಾನ ಬಿಡುವ ಸಂದರ್ಭದಲ್ಲಿ ಮೇಲಧಿಕಾರಿಯ ಪೂರ್ವಾನುಮತಿ ಕಡ್ಡಾಯವೆಂದು ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಆದೇಶ ಹೊರಡಿಸಿದ್ದಾರೆ. ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಹೊರ ನಗರಗಳಿಂದ ಕೇಂದ್ರ ಸ್ಥಾನಕ್ಕೆ ಓಡಾಡುತ್ತಿರುವುದು ಕಂಡುಬಂದಿದ್ದು , ಪ್ರಕೃತಿ ವಿಕೋಪ ಹಾಗೂ ಅತೀ ತುರ್ತು ಸಂದರ್ಭಗಳಲ್ಲಿ ಯಾವುದೇ ಅಗತ್ಯಕ್ರಮ ಕೈಗೊಳ್ಳಲು ಸಾಧ್ಯವಾಗದೇ ಇದ್ದು ಜಿಲ್ಲಾಡಳಿತ ಮುಜುಗರ ಅನುಭವಿಸಬೇಕಾಗಿದೆಯಾದ್ದರಿಂದ ದೂರಿಗೆ ಆಸ್ಪದ ನೀಡದೇ ಎಲ್ಲ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿದ್ದುಕೊಂಡು ಕಾರ್ಯನಿರ್ವಹಿಸಬೇಕೆಂದು ಜಿಲ್ಲಾಧಿಕಾರಿ ಆದೇಶದಲ್ಲಿ ಅಧಿಕಾರಿಗಳಿಗೆ ಎಚ್ಚರಿಸಿದ್ದಾರೆ. ಇದರ ಜೊತೆಗೆ ಮೇಲಧಿಕಾರಿಗಳಿಗೆ ಎಲ್ಲ ಸಮಯದಲ್ಲಿಯೂ ಮೊಬೈಲ್ ಸಂಪರ್ಕಕ್ಕೆ ಸಿಗುವಂತಿರಬೇಕೆಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.ಪ್ರತಿ ಕಚೇರಿಯಲ್ಲಿಯೂ ಸಂದರ್ಶಕರ ವಹಿ ನಿರ್ವಹಣೆ ಮಾಡಬೇಕೆಂದು ತಿಳಿಸಲಾಗಿದೆ. ತುಮಕೂರು ಜಿಪಂನಲ್ಲಿ ಜೂನ್ 30 ರಂದು ನಡೆದ ಕೆಡಿಪಿ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಜಿ.ಪರಮೇಶ್ವರ್ ಅವರ ಸೂಚನೆಯ ಅನುಸಾರ ಈ ಆದೇಶ ಹೊರಡಿಸಲಾಗಿದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿ ತಾಲ್ಲೂಕು ಕೇಂದ್ರಗಳಲ್ಲಿ ಇಲಾಖಾ ಮುಖ್ಯಸ್ಥರುಗಳು, ಜಿಲ್ಲಾ ಕೇಂದ್ರಗಳ ಇಲಾಖಾ ಮುಖ್ಯಸ್ಥರುಗಳು ಬೆಂಗಳೂರು ಹಾಗೂ ಇತರೆ ನಗರಗಳಿಂದ ಓಡಾಡಿಕೊಂಡು ಕಾರ್ಯನಿರ್ವಹಿಸುತ್ತಿದ್ದ ಅಧಿಕಾರಿ ವರ್ಗಕ್ಕೆ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಅವರ ಹೊಸ ಆದೇಶ ಕೇಂದ್ರ ಸ್ಥಾನದಲ್ಲಿ ಉಳಿಯುವಂತೆ ಮಾಡಲಿದೆಯಾ ಕಾದುನೋಡಬೇಕಿದೆ.
