Sunday, May 5, 2024
spot_img
HomeChikballapurಬಾಲ್ಯ ವಿವಾಹ ಮಾಡುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸಿ: ಜಿಲ್ಲಾಧಿಕಾರಿ ಆರ್.ಲತಾ

ಬಾಲ್ಯ ವಿವಾಹ ಮಾಡುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸಿ: ಜಿಲ್ಲಾಧಿಕಾರಿ ಆರ್.ಲತಾ

ಚಿಕ್ಕಬಳ್ಳಾಪುರ: ಬಾಲ್ಯ ವಿವಾಹಗಳನ್ನು ಮಾಡಲು ಯತ್ನಿಸುವ ಪೋಷಕರು ಹಾಗೂ ಸಂಬಂಧಪಟ್ಟವರ ವಿರುದ್ಧ ಮುಲಾಜಿಲ್ಲದೆ ಕ್ರಿಮಿನಲ್ ಪ್ರಕರಣ ದಾಖಲಿಸಿ ಕಟ್ಟುನಿಟ್ಟಿನ ಕ್ರಮಕೈಗೊಂಡು ಬಾಲ್ಯ ವಿವಾಹದ ಪ್ರಕರಣಗಳು ಜಿಲ್ಲೆಯಲ್ಲಿ ಜರುಗದಂತೆ ಮುನ್ನಚ್ಚೆರಿಕೆ ವಹಿಸಬೇಕು  ಈ  ನಿಟ್ಟಿನಲ್ಲಿ  ಅಗತ್ಯ  ಕ್ರಮಗಳನ್ನು  ತೆಗೆದುಕೊಳ್ಳುವಂತೆ  ಜಿಲ್ಲಾಧಿಕಾರಿ ಆರ್.ಲತಾ ಅವರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರಿಗೆ ಸೂಚಿಸಿದರು. 

ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಬಾಲ್ಯ ವಿವಾಹವನ್ನು ತಡೆಯುವ ಜಿಲ್ಲಾ ಮಟ್ಟದ ಸಮನ್ವಯ ಮತ್ತು ಪರಿಶೀಲನಾ ಸಮಿತಿ ಸಭೆ ಹಾಗೂ ಮಹಿಳಾ ದೌರ್ಜನ್ಯ ತಡೆಗಟ್ಟುವ ಜಿಲ್ಲಾ ಮಟ್ಟದ ಸಮಿತಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಬಾಗೇಪಲ್ಲಿ ಮತ್ತು ಗೌರಿಬಿದನೂರು ತಾಲ್ಲೂಕುಗಳಲ್ಲಿ ಹೆಚ್ಚು ಬಾಲ್ಯವಿವಾಹಗಳು ನಡೆದಿವೆ. ಕೂಡಲೇ ಶಿಶು ಅಭಿವೃದ್ಧಿ ಅಧಿಕಾರಿಗಳು ಗ್ರಾಮ ಹಾಗೂ ಹೋಬಳಿ ಮಟ್ಟದಲ್ಲಿನ ಬಾಲ್ಯ ವಿವಾಹ ತಡೆಗಟ್ಟುವ ಸಮಿತಿಯ ಕಾರ್ಯ ಚಟುವಟಿಕೆಗಳನ್ನು ಚುರುಕುಗೊಳಿಸಿ ತಳಮಟ್ಟದಿಂದಲೇ ನಿಯಂತ್ರಿಸಬೇಕು, ಜನರಲ್ಲಿ ಜಾಗೃತಿ ಮೂಡಿಸಬೇಕು. ನಿಯಮಗಳನ್ನು ಉಲ್ಲಂಘಿಸಿ ಬಾಲ್ಯ ವಿವಾಹಕ್ಕೆ ಪ್ರೆರೇಪಣೆ ನೀಡುವವರನ್ನು ಕಾನೂನಿನ  ಕಠಿಣ ಕ್ರಮಕ್ಕೆ ಒಳಪಡಿಸಬೇಕು. ಈ ನಿಟ್ಟಿನಲ್ಲಿ  ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.  

ಬಾಲ್ಯ ವಿವಾಹ ಮಾಡುವುದರಿಂದ ಮಕ್ಕಳ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಉಂಟಾಗುತ್ತದೆ. ಅಪ್ರಾಪ್ತ ವಯಸ್ಸಿನ ಹೆಣ್ಣು ಮಕ್ಕಳಿಗೆ ವಿವಾಹ ಮಾಡುವ ಪರಿಸ್ಥಿತಿಯನ್ನು ಹೋಗಲಾಡಿಸಲು ಅರಿವು ಕಾರ್ಯಕ್ರಮಗಳನ್ನು ಹೆಚ್ಚು ಹಾಕಿಕೊಳ್ಳಬೇಕು. ಹೆಣ್ಣು ಮಕ್ಕಳನ್ನು ಚಿಕ್ಕ ವಯಸ್ಸಿನಲ್ಲಿ ಮದುವೆ ಮಾಡಲು ಮುಂದಾಗುವುದರಿಂದ ಉಂಟಾಗಬಹುದಾದ ದುಷ್ಪರಿಣಾಮಗಳ  ಬಗ್ಗೆ  ಮನವರಿಕೆ ಮಾಡಿ ಮನ ಪರಿವರ್ತಿಸಲು ಜಾಗೃತಿ ಮೂಡಿಸಬೇಕು ಎಂದರು.

ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿ

ಬಾಲ್ಯ ವಿವಾಹಗಳನ್ನು ತಡೆಗಟ್ಟಲು ಗ್ರಾಮ ಮಟ್ಟದಲ್ಲಿಯೂ ಸಹ ಬಾಲ್ಯ ವಿವಾಹದಿಂದಾಗುವ ದುಷ್ಪರಿಣಾಮಗಳ ಕುರಿತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಕ್ಷಣ, ಆರೋಗ್ಯ ಇಲಾಖೆಗಳು ಹಾಗೂ ಸ್ಥಳೀಯ ಸಂಘ-ಸಂಸ್ಥೆಗಳ ಸಹಯೋಗದೊಂದಿಗೆ ಕರಪತ್ರ, ಭಿತ್ತಿಪತ್ರಗಳನ್ನು ಹಂಚುವ ಮೂಲಕ ಜನರಲ್ಲಿ ಅರಿವು ಮೂಡಿಸಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು. ಈ ವೇಳೆ 2021-22ನೇ ಸಾಲಿನಲ್ಲಿ ಡಿಸೆಂಬರ್ ಅಂತ್ಯಕ್ಕೆ ಜಿಲ್ಲೆಯಲ್ಲಿ ಒಟ್ಟಾರೆ 93 ಬಾಲ್ಯವಿವಾಹ ದೂರುಗಳು ದಾಖಲಾಗಿವೆ. ಇದರಲ್ಲಿ 76 ಬಾಲ್ಯ ವಿವಾಹಗಳನ್ನು ತಡೆಗಟ್ಟಲಾಗಿದೆ. ಕಾನೂನು ಉಲ್ಲಂಘಿಸಿ  ಜಿಲ್ಲೆಯಲ್ಲಿ 17 ಬಾಲ್ಯ ವಿವಾಹಗಳು ನಡೆದಿದ್ದು, ಅವರ ವಿರುದ್ಧ ಪೋಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲು ಮಾಡಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕಿ ಅಶ್ವತ್ಥಮ್ಮ ಸಭೆಗೆ ಮಾಹಿತಿ ನೀಡಿದರು. 

2021-22ನೇ ಸಾಲಿನ ಡಿಸೆಂಬರ್ ಅಂತ್ಯಕ್ಕೆ ಜಿಲ್ಲೆಯಲ್ಲಿ 541 ಕೌಟುಂಬಿಕ ಕಲಹ ಮಹಿಳಾ ದೌರ್ಜನ್ಯ ಪ್ರಕರಣಗಳು ದಾಖಲಾಗಿದ್ದು, ಈ ಪೈಕಿ 507 ಪ್ರಕರಣಗಳನ್ನು ಇತ್ಯರ್ಥ ಪಡಿಸಿದ್ದು, 34 ಪ್ರಕರಣಗಳ ಇತ್ಯರ್ಥ ಪ್ರಕ್ರಿಯೆ ಪ್ರಗತಿಯಲ್ಲಿದೆ. ಸರ್ಕಾರಿ ಶಾಲೆ, ಕಾಲೇಜು, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಎಲ್ಲಾ ಅಂಗನವಾಡಿ ಕೇಂದ್ರಗಳಲ್ಲಿ ಸಂಕಷ್ಟಕ್ಕೊಳಗಾದ ಮಕ್ಕಳ ರಕ್ಷಣೆಗಾಗಿ ತುರ್ತಾಗಿ ಸಂಪರ್ಕಿಸಲು ಉಚಿತ ಮಕ್ಕಳ ಸಹಾಯವಾಣಿ-1098  ನಾಮಫಲಕ ಬರೆಯಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. 

ಜಿಲ್ಲಾ  ಮಟ್ಟದ ಸ್ಥಳೀಯ ದೂರುಗಳ ಸಮಿತಿಯ ಅಧ್ಯಕ್ಷರನ್ನು ನೇಮಕ  ಮಾಡಲು  ಕ್ರಮ

 10 ಹೆಚ್ಚು ಮಹಿಳೆಯರು ಕೆಲಸ ಮಾಡುವ (ಕಚೇರಿ/ಸಂಸ್ಥೆ, ಅಥವಾ ಕೆಲಸದ ಸ್ಥಳಗಳಲ್ಲಿ ಸೇರಿದಂತೆ) ಸ್ಥಳಗಳಲ್ಲಿ ನಡೆಯುವ ಲೈಂಗಿಕ ಕಿರುಕುಳ ಹಾಗೂ ಮಹಿಳಾ ದೌರ್ಜನ್ಯಗಳ ಬಗ್ಗೆ ದೂರು ಸಲ್ಲಿಸಲು ಕೆಲಸಗಳ ಸ್ಥಳಗಳಲ್ಲಿ ಒಂದು ಆಂತರಿಕ ದೂರು ಸಮಿತಿಯನ್ನು ಕಚೇರಿ/ಸಂಸ್ಥೆಯ ಮುಖ್ಯಸ್ಥರು ಅಥವಾ ಮಾಲೀಕರು ಕಡ್ಡಾಯವಾಗಿ ಸ್ಥಾಪಿಸಬೇಕು. 10 ಕ್ಕಿಂತ ಕಡಿಮೆ ಜನರು ಕೆಲಸ ಮಾಡುವ ಸ್ಥಳಗಳಲ್ಲಿನ ನೊಂದ ಮಹಿಳೆಯರ ದೂರುಗಳನ್ನು ಆಲಿಸಲು ಜಿಲ್ಲಾ ಮಟ್ಟದಲ್ಲಿ “ಸ್ಥಳೀಯ ದೂರುಗಳ ಸಮಿತಿ”ಗೆ ಸಮಾಜ ಕಲ್ಯಾಣ ಕ್ಷೇತ್ರದಲ್ಲಿ, ಸಮರ್ಥರಾದ ಮತ್ತು ಮಹಿಳೆಯರ ಅಭ್ಯುದಯಕ್ಕೆ ಕಾರಣವಾದ ವ್ಯಕ್ತಿಗಳ ಪೈಕಿ ಒಬ್ಬರು ಮಹಿಳೆಯನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಬೇಕಾಗಿರುತ್ತದೆ. ಈ ಸಮಿತಿಯ ಅಧ್ಯಕ್ಷರ ಆಯ್ಕೆಗೆ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರಿಗೆ ತಿಳಿಸಿದರು.

ಮಹಿಳೆಯರ ಮೇಲಿನ  ದೌರ್ಜನ್ಯ ತಡೆಗೆ ಪುರುಷರಲ್ಲಿ ಅರಿವು ಮೂಡಿಸಿ

ಕೌಟುಂಬಿಕ ಹಿಂಸೆ ಮತ್ತು ಮಹಿಳೆಯರ ಮೇಲಿನ ತಡೆಗಟ್ಟುವ ಕಾಯ್ದೆ ಕುರಿತು ಮಹಿಳೆಯರಿಗೆ ಜಾಗೃತಿ ಮೂಡಿಸಬೇಕು. ಅದರಲ್ಲೂ ಮುಖ್ಯವಾಗಿ ಪುರುಷರಿಗೆ  ಕೌಟುಂಬಿಕ ಹಿಂಸೆ ಮತ್ತು ಮಹಿಳೆಯರ ಮೇಲಿನ ದೌರ್ಜನ್ಯ ಎಸಗಿದರೆ ಏನೆಲ್ಲಾ ಶಿಕ್ಷೆಗಳಿವೆ ಎನ್ನುವ ಕುರಿತು ಜಾಗೃತಿ ಕಾರ್ಯಕ್ರಮಗಳು  ಹಾಗೂ  ಕಾರ್ಯಾಗಾರಗಳ ಮೂಲಕ ಜಾಗೃತಿ ಮೂಡಿಸಬೇಕು. ಈ ಹಿನ್ನೆಲೆಯಲ್ಲಿ ಐ.ಇ.ಸಿ  ಕಾರ್ಯ ಚಟುವಟಿಕೆಗಳು ಹಮ್ಮಿಕೊಂಡು ಈ ಕಾಯ್ದೆ ಬಗ್ಗೆ ಗ್ರಾಮ, ಹೋಬಳಿ  ಹಾಗೂ ತಾಲ್ಲೂಕು ಮಟ್ಟಗಳಲ್ಲಿ ಅರಿವು ಮೂಡಿಸುವ ಕಾರ್ಯವನ್ನು ನಡೆಸಬೇಕು ಸಿಡಿಪಿಒ ಗಳು  ಮಾಡಬೇಕು  ಎಂದರು.

ಈ ವೇಳೆ ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ಸಂರಕ್ಷಣಾ ಅಧಿನಿಯಮದಡಿ 2021-22 ನೇ ಸಾಲಿನಲ್ಲಿ ಡಿಸೆಂಬರ್ 2021 ರ ಅಂತ್ಯಕ್ಕೆ ಜಿಲ್ಲೆಯಲ್ಲಿ  58 ಪ್ರಕಟಣಗಳು ದಾಖಲಾಗಿದ್ದು, ಈ ಪೈಕಿ 37 ಪ್ರಕರಣಗಳು ಇತ್ಯರ್ಥಗೊಂಡು 21 ಪ್ರಕರಣಗಳು ಬಾಕಿ ಉಳಿದಿವೆ. ಮಹಿಳಾ ದೌರ್ಜನ್ಯಕ್ಕೆ ಒಳಗಾದ ಮಹಿಳೆಯರಿಗೆ ಒಂದೇ ಸೂರಿನಡಿ ವೈದ್ಯಕೀಯ ಸೇವೆ, ಕಾನೂನು ಸಲಹೆ, ಪೊಲೀಸ್ ರಕ್ಷಣೆ ಹಾಗೂ ಮಹಿಳಾ ಆಪ್ತಸಮಾಲೋಚನೆ ಕಾರ್ಯಗಳನ್ನು ಸಖಿ  ಒನ್  ಸ್ಟಾಪ್  ಕೇಂದ್ರದ  ಮೂಲಕ ಸಮರ್ಪಕವಾಗಿ  ಮಾಡಲಾಗುತ್ತಿದೆ. ಶೋಷಣೆಗೆ ಒಳಪಟ್ಟು  ಹಾಗೂ  ಇನ್ನಿತರೇ  ಕಾರಣಗಳಿಂದ  ಆಶ್ರಯ  ಬಯಸುವ ಮಹಿಳೆಯರ ಪುನರ್ ವಸತಿಗಾಗಿ ಜಿಲ್ಲಾ ಕೇಂದ್ರದಲ್ಲಿ ಸ್ವಾಧಾರ ಕೇಂದ್ರದ ಮೂಲಕ ವ್ಯವಸ್ಥೆ ಯನ್ನು  ಸಮರ್ಪಕವಾಗಿ ಮಾಡಲಾಗುತ್ತಿದೆ. ಈ ಕೇಂದ್ರದಲ್ಲಿ 18 ಮಹಿಳೆಯರು ಆಶ್ರಯ ಪಡೆದಿದ್ದಾರೆ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು. 

ದಿನವಿಡಿ ಜಿಲ್ಲಾಧಿಕಾರಿಗಳಿಂದ ಸರಣಿ ಸಭೆ

ಜಿಲ್ಲಾಧಿಕಾರಿಗಳು ಬೆಳಿಗ್ಗೆ 11:00 ಗಂಟೆಗೆ ಬಾಲ್ಯ ವಿವಾಹಗಳನ್ನು ತಡೆಯುವ ಜಿಲ್ಲಾ ಮಟ್ಟದ ಸಮನ್ವಯ ಮತ್ತು ಪರಿಶೀಲನಾ ಸಮಿತಿ ಸಭೆಯನ್ನು ಆರಂಭಿಸಿ, ಮಹಿಳೆಯರು ಮತ್ತು ಮಕ್ಕಳ ವಿರುದ್ಧ ನಡೆಯುವ ದೌರ್ಜನ್ಯಗಳನ್ನು ತಡೆಗಟ್ಟಲು ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆ, ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ಸಂರಕ್ಷಣಾ ಅಧಿನಿಯಮ-2005ರ ಯೋಜನೆಯ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆ, ಸಖಿ ಒನ್ ಸ್ಟಾಪ್ ಕೇಂದ್ರ ಜಿಲ್ಲಾ ಟಾಸ್ಕ್ ಫೋರ್ಸ್ ಸಭೆ, ಮಾದಕ ವಸ್ತು ಸೇವನೆ ನಿಷೇಧ ಕಾಯ್ದೆಯ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆ, ಪೋಷಣ್ ಅಭಿಯಾನ್ ಹಾಗೂ ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆಗಳ ಅನುಷ್ಠಾನ ಸಮಿತಿ ಸಭೆ, ಗಣರಾಜ್ಯೋತ್ಸವ ಆಚರಣೆಯ ಪೂರ್ವ ಸಿದ್ಧತೆಯ ಸಭೆ ಹಾಗೂ ಕೊನೆಯದಾಗಿ ಯುವ ನೀತಿ ಸಮಿತಿ ರಚನೆಯ ಪೂರ್ವ ಸಿದ್ಧತಾ ಸಭೆಗಳನ್ನು ಸಂಜೆಯವರೆಗೂ ನಡೆದವು. ಈ  ಜಿಲ್ಲಾಮಟ್ಟ ಟಾಸ್ಕ್ ಪೋರ್ಸ್  ಸಮಿತಿ  ಸಭೆಗಳ ಕಾರ್ಯಗಳ ಪ್ರಗತಿ  ಪರಿಶೀಲನೆಯನ್ನು   ಜಿಲ್ಲಾಧಿಕಾರಿಗಳು  ನಡೆಸಿದರು. ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಸಭೆಯಲ್ಲಿಯೇ ಲಘು ಉಪಹಾರ ನೀಡಿಲಾಯಿತು. ಬಿಡುವಿಲ್ಲದಂತೆ ದಿನವಿಡಿ ಸರಣಿಯಾಗಿ ಸಭೆಗಳು ನಡೆದವು.

ಸಭೆಯಲ್ಲಿ ಗೌರವಾನ್ವಿತ ಹಿರಿಯ ಸಿವಿಲ್ ನ್ಯಾಯಾಧೀಶರಾದ ಲಕ್ಷ್ಮೀಕಾಂತ್ ಜೆ.ಮಿಸ್ಕಿನ್, ಅಪರ ಜಿಲ್ಲಾಧಿಕಾರಿ ಹೆಚ್.ಅಮರೇಶ್, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಶಿವಕುಮಾರ್, ಜಿಲ್ಲಾ ಮಟ್ಟದ ವಿವಿಧ ಟಾಸ್ಕ್ ಫೋರ್ಸ್ ಸಮಿತಿಗಳ ಸದಸ್ಯರು, ಪದಾಧಿಕಾರಿಗಳು, ಸಾಂತ್ವಾನ, ಸ್ವಾಧಾರ, ಸಖಿ ಕೇಂದ್ರಗಳ ಮುಖ್ಯಸ್ಥರು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments