Monday, May 6, 2024
spot_img
HomeChikballapurಜಿಲ್ಲೆಯ ಭೂಕಂಪನ ಪೀಡಿತ ಪ್ರದೇಶಗಳಿಗೆ ಸಚಿವ ಡಾ. ಕೆ ಸುಧಾಕರ್ ಭೇಟಿ :ಸಾರ್ವಜನಿಕರಲ್ಲಿ ಮನೋಸ್ಥೈರ್ಯ

ಜಿಲ್ಲೆಯ ಭೂಕಂಪನ ಪೀಡಿತ ಪ್ರದೇಶಗಳಿಗೆ ಸಚಿವ ಡಾ. ಕೆ ಸುಧಾಕರ್ ಭೇಟಿ :ಸಾರ್ವಜನಿಕರಲ್ಲಿ ಮನೋಸ್ಥೈರ್ಯ

ಚಿಕ್ಕಬಳ್ಳಾಪುರ: ಜನವರಿ 5 ರ ಬೆಳಗಿನ ಜಾವ 3:16 ಗಂಟೆಗೆ ಚಿಕ್ಕಬಳ್ಳಾಪುರ ತಾಲ್ಲೂಕಿನ ಅಡ್ಡಗಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಲಘು ಭೂಕಂಪನ ಸಂಭವಿಸಿ ರಿಕ್ಟರ್ ಮಾಪನದಲ್ಲಿ 2.6 ರಷ್ಟು ತೀವ್ರತೆ ದಾಖಲಾಗಿದ್ದ ಹಿನ್ನೆಲೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವರು ಹಾಗೂ ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಕೆ.ಸುಧಾಕರ್ ರವರು ಚಿಕ್ಕಬಳ್ಳಾಪುರ ತಾಲ್ಲೂಕಿನ ಬಂಡಹಳ್ಳಿ, ಶೆಟ್ಟಿಗೆರೆ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಲ್ಲದೇ ಸ್ಥಳೀಯರಲ್ಲಿ ಮನೋಸ್ಥೈರ್ಯ ತುಂಬಿದರು.

ಈ ವೇಳೆ ಅವರು ಮಾತನಾಡಿ, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಈ ವರ್ಷ ಸುರಿದ ಧಾರಾಕಾರ ಮಳೆಯು ಕಳೆದ 50 ವರ್ಷಗಳಲ್ಲಿಯೇ ಆಗಿರುವುದಿಲ್ಲ. ಈ ಮಹಾಮಳೆಯಿಂದ ಅಂತರ್ಜಲದಲ್ಲಿ ತೀವ್ರ ಬದಲಾವಣೆಯಾಗಿದೆ. ಭೂಮಿಯ ಆಳಕ್ಕೆ ನೀರು ನುಸುಳುತ್ತಿದೆ. ಹೀಗಾಗಿ ಈ ರೀತಿಯ ಭೂಕಂಪನಗಳು ಈ ಭಾಗದಲ್ಲಿ ಹಲವು ಭಾರಿ ಸಂಭವಿಸಿವೆ. ಚಿಕ್ಕಬಳ್ಳಾಪುರ ಜಿಲ್ಲೆಯು ಭೂಕಂಪ ವಲಯದಿಂದ ಬಹುದೂರವಿದ್ದು, ಸುರಕ್ಷಿತ ವಲಯದಲ್ಲಿದೆ. ಈ ಭಾಗದಲ್ಲಿ 

ಭೂಕಂಪ ಸಂಭವಿಸುವ ಸಾಧ್ಯತೆಗಳು ಅತಿ ವಿರಳ. ಜೊತೆಗೆ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರವು ನಿರಂತರವಾಗಿ ಈ ಭಾಗದ ಮೇಲೆ ತೀವ್ರ ಕಣ್ಗಾವಲು ಇಟ್ಟಿದೆ ಹಾಗೂ ಜಿಲ್ಲಾಡಳಿತವೂ ಸಹ ಹೆಚ್ಚಿನ ನಿಗಾವಹಿಸಿದೆ. ಆದ್ದರಿಂದ ಜನರು ಯಾವುದೇ ವದಂತಿಗಳಿಗೆ ಕಿವಿಕೊಡಬಾರದು ಹಾಗೂ ಈ ಬಗ್ಗೆ ಸಾರ್ವಜನಿಕರು ಹೆಚ್ಚಿನ ಆತಂಕಕ್ಕೆ ಒಳಗಾಗುವ ಅವಶ್ಯಕತೆಯಿಲ್ಲ ಎಂದರು.

ಇತ್ತೀಚಿಗೆ ಜಿಲ್ಲೆಯಲ್ಲಿ ಸಂಭವಿಸಿರುವ ಭೂಕಂಪನಗಳನ್ನು ಅವಲೋಕಿಸಲಾಗಿ ಭೂಕಂಪನದ ತೀವ್ರತೆಯ ನಕಾಶೆಯನ್ವಯ ಈ ಭೂಕಂಪನಗಳ ತೀವ್ರತೆಯು ಅತ್ಯಂತ ಕನಿಷ್ಠ ಪ್ರಮಾಣದ್ದಾಗಿದ್ದು, ಸುಮಾರು 20 ರಿಂದ 30 ಕಿ.ಮೀ ವ್ಯಾಪ್ತಿಯವರೆಗೆ ಭೂಕಂಪನದ ಅನುಭವವಾಗಿರಬಹುದೆಂದು ಅಂದಾಜಿಸಲಾಗಿದೆ. ಇದರ ಪರಿಣಾಮದಿಂದಾಗಿ ಭೂಮಿಯು ಕೊಂಚ ಅಲುಗಾಡಿದ ಅನುಭವವಾಗಿದ್ದರೂ ಸಹ ಈ ಪ್ರಮಾಣದ ಭೂಕಂಪನವು ಸ್ಥಳೀಯ ಸಮುದಾಯಕ್ಕೆ ಯಾವುದೇ ರೀತಿಯಲ್ಲಿಯೂ ಅಪಾಯಕಾರಿಯಲ್ಲ. ಇದರಿಂದ ಜನರು ಗಾಬರಿಗೊಳ್ಳುವ ಹಾಗೂ ಹೆಚ್ಚಿನ ಆತಂಕಗೊಳ್ಳುವ ಅವಶ್ಯಕತೆಯಿಲ್ಲವೆಂದು ಭೇಟಿ ನೀಡಿದ ಗ್ರಾಮಗಳ ಸ್ಥಳೀಯರಿಗೆ ಸಚಿವರು ಮನೋಸ್ಥೈರ್ಯ ತುಂಬಿದರು.

ಜನವರಿ 5 ರಂದು ಸಂಭವಿಸಿರುವ ಭೂಕಂಪನದ ಕೇಂದ್ರಸ್ಥಾನವು ಚಿಕ್ಕಬಳ್ಳಾಪುರ ತಾಲ್ಲೂಕಿನ ಅಡ್ಡಗಲ್ ಗ್ರಾಮ ಪಂಚಾಯತಿಯಿಂದ ಸುಮಾರು 1.5 ಕಿ.ಮೀ ದೂರದಲ್ಲಿ ದಾಖಲಾಗಿದೆ. ಇದು ಸುಮಾರು 2.6 ರ ತೀವ್ರತೆಯನ್ನು ಹೊಂದಿದ್ದು 12 ಕಿ.ಮೀ ದೂರದ ಭೂಗರ್ಭದಲ್ಲಿ ಕೇಂದ್ರೀಕೃತವಾಗಿದೆ. ಇದೇ ವೇಳೆ ಭೂಕಂಪನ ಪೀಡಿತ ಸ್ಥಳದಿಂದಲೇ ರಾಜ್ಯ ವಿಪತ್ತು ನಿರ್ವಹಣಾ ಕೇಂದ್ರದ ನಿರ್ದೇಶಕರಾದ ಮನೋಜ್ ಅವರೊಂದಿಗೆ ದೂರವಾಣಿ ಮುಖಾಂತರ ಸಚಿವರು ಮಾತನಾಡಿ ಪದೇ ಪದೇಪದೇ ಜಿಲ್ಲೆಯಲ್ಲಿ ಸಂಭವಿಸುತ್ತಿರುವ ಭೂಕಂಪನಗಳ ಬಗ್ಗೆ ವಿಸ್ತೃತವಾಗಿ ಅಧ್ಯಯನ ಮಾಡಿ ಶೀಘ್ರದಲ್ಲಿಯೇ ವರದಿ ನೀಡಿ ಜಿಲ್ಲೆಯ ಜನತೆಗೆ ಸತ್ಯ ಮತ್ತು ವಸ್ತುನಿಷ್ಠ ಸಂಗತಿಯನ್ನು ತಿಳಿಸಿ ಧೈರ್ಯ ತುಂಬುವಂತೆ ಸೂಚನೆಯನ್ನು ನೀಡಿದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಆರ್. ಲತಾ, ಚಿಕ್ಕಬಳ್ಳಾಪುರ ತಾಲೂಕಿನ ತಹಸಿಲ್ದಾರ್ ಗಣಪತಿಶಾಸ್ತ್ರೀ, ಮತ್ತು ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಹರ್ಷವರ್ಧನ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಹಾಜರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments