ಪಾಲಾರ್, ದೇವನಹಳ್ಳಿ
ಪೂಜನಹಳ್ಳಿ ಅಂಗನವಾಡಿ ಕಟ್ಟಡ ಲಕ್ಷಾಂತರ ರೂಪಾಯಿ ಬೆಲೆಬಾಳುವ ಈ ಕಟ್ಟಡ ಸರ್ಕಾರಿ ಅಂಗನವಾಡಿಯದ್ದೆ ಎನ್ನುವುದಕ್ಕೂ ದಾಖಲೆಗಳು ಇದೆ,ಆದರೂ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಟಿ. ಶ್ರೀನಿವಾಸ್ ಅವರು ನಕಲಿ ಖಾತೆ ಮಾಡಿ ಖಾಸಗಿಯವರಿಗೆ ಕೊಟ್ಟಿದ್ದಾರೆ,ಸರ್ಕಾರ ಇದನ್ನು ಪರಿಶೀಲಿಸಿ ಅವರನ್ನು ಅಮಾನತ್ತು ಮಾಡಬೇಕು ಅವರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ಕನ್ನಮಂಗಲ ಗ್ರಾಮ ಪಂಚಾಯತಿ ಸದಸ್ಯ ಸೋಮಶೇಖರ್ ಆಗ್ರಹಿಸಿದ್ದಾರೆ.
ದೇವನಹಳ್ಳಿ ಪಟ್ಟಣ ಜಿಲ್ಲಾ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಸರ್ಕಾರದ ವತಿಯಿಂದ ಒಂದು ನಿವೇಶನ ಕಲ್ಪಿಸಬೇಕಾದರೆ 30×40ಅಥವಾ 60×40 ನೀಡುತ್ತಾರೆ 9000 ಅಡಿ ಜಾಗವನ್ನು ಯಾವುದೇ ನಿವೇಶನಗಳು ನೀಡುವುದಿಲ್ಲ, ಅಕ್ರಮವಾಗಿ ಕೋಟ್ಯಾಂತರ ಬೆಲೆಬಾಳುವ ಸರ್ಕಾರಿ ಅಂಗನವಾಡಿ ಸ್ಥಳವನ್ನು ಕನ್ನಮಂಗಲ ಪಂಚಾಯತಿ ಪಿಡಿಒ ಟಿ.ಶ್ರೀನಿವಾಸ್ ದುಡ್ಡಿನ ಆಸೆಗೆ ಖಾಸಗಿ ವ್ಯಕ್ತಿಗಳ ಹೆಸರಿಗೆ ನಕಲಿ ಹಕ್ಕು ಪತ್ರಗಳನ್ನು ಸೃಷ್ಟಿಸಿ ಮಾರಾಟ ಮಾಡಿರುತ್ತಾರೆ ಎಂದು ಹೇಳಿದರು.
ಲೋಕಾಯುಕ್ತ ಕೇಸ್ ನಡೆಯುತ್ತಿರುವಾಗಲೇ ಎಂ. ಚಂದ್ರೇಗೌಡ ಬಿನ್ ಲೇಟ್ ಎಸ್ .ಜಿ. ಮುನೇಗೌಡರ ಪಿತ್ರಾರ್ಜಿತ ಆಸ್ತಿಯ ಖಾತಾ ನಂ. 37/1 ಮತ್ತು 37 / 2 ರ ಅಂಗನವಾಡಿ ಹಾಲಿನ ಡೈರಿ ಹಾಗೂ ಶಿಥಿಲಾವಸ್ಥೆಯಲ್ಲಿರುವ ಕಟ್ಟಡವನ್ನು ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಶ್ರೀನಿವಾಸ್ ಬೇರೆ ವ್ಯಕ್ತಿಗಳಿಗೆ ಅಕ್ರಮವಾಗಿ ಖಾತೆ ಮಾಡಿದ್ದಾರೆ. ಸರ್ಕಾರಿ ಸಂಬಳವನ್ನು ಪಡೆದು ಸರ್ಕಾರದ ಸಾರ್ವಜನಿಕ ಆಸ್ತಿಗಳನ್ನು ಸಂರಕ್ಷಿಸುವುದು ಬಿಟ್ಟು ಖಾಸಗಿ ವ್ಯಕ್ತಿಗಳಿಗೆ ನಕಲಿ ಹಕ್ಕು ಪತ್ರಗಳನ್ನು ಮಾಡಿಸಿ ದಾನ ಪತ್ರಗಳನ್ನು ಸೃಷ್ಟಿಸಿ ಸರ್ಕಾರಿ ಜಾಗವನ್ನು ಖಾಸಗಿ ಅವರಿಗೆ ಮಾಡಿಕೊಡುವ ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.
ಎಂ.ಚಂದ್ರೇಗೌಡ ಮಾತನಾಡಿ 1991ರಿಂದ ಇಲ್ಲಿಯವರೆಗೂ 30 ವರ್ಷಗಳ ಕಾಲ ಹಾಲಿನ ಡೈರಿಯ ಬಾಡಿಗೆ ನನಗೆ ನೀಡಿರುವುದಕ್ಕೆ ದಾಖಲೆ ಹಾಗೂ ಶಿಥಿಲಾವಸ್ಥೆಯಲ್ಲಿರುವ ಮತ್ತೊಂದು ಕಟ್ಟಡ ವಿದ್ಯುತ್ ಬಿಲ್ ಅನ್ನು ಇಂದಿನವರೆಗೂ ನಾವೇ ಬೆಸ್ಕಾಂ ಕಂಪನಿಗೆ ಪಾವತಿಸಿಕೊಂಡು ಬಂದಿರುವ ದಾಖಲೆಗಳಿವೆ, ಆದರೂ ಸಹ ಖಾಸಗಿ ವ್ಯಕ್ತಿಗಳಿಗೆ ಪರಭಾರೆ ಮಾಡಿ ಅಧಿಕಾರ ದುರುಪಯೋಗಪಡಿಸಿಕೊಂಡ ಅಕ್ರಮ ಕೃತ್ಯದಲ್ಲಿ ಪಾಲುದಾರರಾಗಿರುವ ಕನ್ನಮಂಗಲ ಗ್ರಾಮ ಪಂಚಾಯಿತಿಯ ಪಿಡಿಒ ಟಿ .ಶ್ರೀನಿವಾಸ್ , ಕಾರ್ಯದರ್ಶಿಯಾದ ಸೀನಪ್ಪ, ದ್ವಿತೀಯ ದರ್ಜೆ ಲೆಕ್ಕ ಸಹಾಯಕರಾದ ಲಕ್ಷ್ಮಣ್ ಹಾಗೂ ತಿದ್ದುಪಡಿಗೆ ಒಳಪಡಿಸಲು ಸಹಕಾರ ನೀಡಿರುವ ದೇವನಹಳ್ಳಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕರಾದ ಶ್ರೀನಾಥ್ ಗೌಡ ವಿರುದ್ಧ ಕ್ರಿಮಿನಲ್ ಮೊಕದಮ್ಮೆ ದಾಖಲಿಸಿ ಸೂಕ್ತ ಶಿಸ್ತು ಕ್ರಮ ಕೈಗೊಂಡು ನಮ್ಮ ಪಿತ್ರಾರ್ಜಿತವಾದ ಖಾನೇಷುಮಾರಿ ಜಾಗವನ್ನು ಉಳಿಸಿಕೊಡಬೇಕೆಂದು ಅಗ್ರಹಿಸಿದ್ದಾರೆ.