ಪಾಲಾರ್ ಪತ್ರಿಕೆ | Palar Pathrike
ಚಿoತಾಮಣಿ : ನಗರದ ಎನ್.ಆರ್.ಬಡಾವಣೆಯಲ್ಲಿರುವ ಬ್ರಹ್ಮಚೈತನ್ಯ ಶ್ರೀರಾಮ ಮಂದಿರದಲ್ಲಿ ಕಳೆದ ಏಳು ದಿನಗಳಿಂದ ನಡೆಯುತ್ತಿದ್ದ ಶ್ರೀಬ್ರಹ್ಮಚೈತನ್ಯ ಮಹಾರಾಜರ ೧೦೯ ನೇ ಆರಾಧನೋತ್ಸಕ್ಕೆ ಕೊನೆಯ ದಿನವಾದ ಭಾನುವಾರದಂದು ರಥೋತ್ಸವದೊಂದಿಗೆ ವೈಭವದ ತೆರೆ ಬಿದ್ದಿದೆ.
ಆರಾಧನೋತ್ಸವದ ಅಂಗವಾಗಿ ಭಾನುವಾರ ಬೆಳಿಗ್ಗೆ ಶ್ರೀ ಬ್ರಹ್ಮಚೈತನ್ಯರ ದಿವ್ಯ ಪಾದುಕೆಗಳಿಗೆ ಭಕ್ತಾಧಿಗಳಿಂದ ಕ್ಷೀರಾಭಿಷೇಕವನ್ನು ಹಮ್ಮಿಕೊಳ್ಳಲಾಗಿತ್ತು. ಭಕ್ತರು ಸರದಿ ಸಾಲಿನಲ್ಲಿ ನಿಂತು ಪಾದುಕೆಗಳಿಗೆ ಹಾಲಿನ ಅಭಿಷೇಕ ಸಲ್ಲಿಸಿ ದರ್ಶನವನ್ನು ಪಡೆದರು. ಸಪರಿವಾರನಾಗಿರುವ ಶ್ರೀರಾಮಚಂದ್ರಪ್ರಭುವಿಗೆ ಮಂದಿರದ ಪ್ರಕಾರದಲ್ಲಿ ಶ್ರೀರಾಮ ತಾರಕ ಮಂತ್ರವನ್ನು ಜಪಿಸುತ್ತಾ ಸಾಮೂಹಿಕ ಪ್ರದಕ್ಷಿಣೆ ನಮಸ್ಕಾರವನ್ನು ನೂರಾರು ಭಕ್ತರು ನೆರವೇರಿಸಿದರು. ನಂತರ ಗರ್ಭಗುಡಿಯಲ್ಲಿ ವಿಶೇಷ ಅಲಂಕಾರವನ್ನು ಮಾಡಲಾಗಿತ್ತು. ಅಷ್ಟಾವಧಾನಸೇವೆ, ಸಾಮೂಹಿಕ ಭಜನೆ, ಮಹಾಮಂಗಳಾರತಿಯನ್ನು ನೆರವೇರಿಸಲಾಯಿತು.
ಹನುಮಾನ್, ಬ್ರಹ್ಮಚೈತನ್ಯ ಗುರುಗಳ ಸಮೇತ ಶ್ರೀರಾಮ, ಲಕ್ಷ÷್ಮಣ, ಸೀತಾಮಾತೆಯ ವಿಗ್ರಹಗಳನ್ನು ವಿಶೇಷವಾಗಿ ಅಲಂಕರಿಸಿ ಶೇಷವಾಹನದಲ್ಲಿರಿಸಿ ಮಂಗಳವಾದ್ಯಗಳೊAದಿಗೆ ರಥೋತ್ಸವವನ್ನು ನಡೆಸಲಾಯಿತು. ರಥೋತ್ಸವದಲ್ಲಿ ನಾದಸ್ವರ, ಕೋಲಾಟ, ವೇದಘೋಷ, ಭಜನಾ ನೃತ್ಯ, ಸಾಮೂಹಿಕ ಸಂಕೀರ್ತನೆಗಳೊAದಿಗೆ ರಥೋತ್ಸವವನ್ನು ನಡೆಸಲಾಯಿತು. ಭಕ್ತರು ಅಧಿಕ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಶನಿವಾರ ರಾತ್ರಿ ಸುಶ್ರಾವ್ಯ ಗಾಯಕ ಅಮೇರಿಕಾದ ಕೃಷ್ಣ ಮಡಕಶಿರ ರವರಿಂದ ಭಕ್ತಿಗೀತೆಗಳ ಗಾಯನವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಟ್ರಸ್ಟ್ನ ಅಧ್ಯಕ್ಷರಾದ ಜಿ.ಹೆಚ್.ವೆಂಕಟೇಶಮೂರ್ತಿ, ಉಪಾಧ್ಯಕ್ಷ ಜಿ.ಹೆಚ್.ರಘುನಾಥ್, ಬಿ.ಸಿ.ಪ್ರಸಾದ್, ರಾಜಾರಾಂ, ಜಿ.ಜಯರಾಂ, ನಾಣಿ, ಗುರುನಾಥ್, ರಾಧೇಶ್ಯಾಂ, ವಿನಯ್, ಜಗದೀಶ್ ಮುಂತಾದವರು ಭಾಗವಹಿಸಿದ್ದರು.