Thursday, April 25, 2024
spot_img
HomeChikballapurಫೆಬ್ರವರಿಗೆ ಉಚಿತ ನಿವೇಶನದ ಹಕ್ಕುಪತ್ರ ವಿತರಣೆ

ಫೆಬ್ರವರಿಗೆ ಉಚಿತ ನಿವೇಶನದ ಹಕ್ಕುಪತ್ರ ವಿತರಣೆ

ಚಿಕ್ಕಬಳ್ಳಾಪುರ: ಫೆಬ್ರವರಿ ಅಂತ್ಯದೊಳಗೆ ಕ್ಷೇತ್ರದ ಎಲ್ಲ ನಿವೇಶನ ರಹಿತರಿಗೂ ನಿವೇಶನ ವಿತರಿಸಲು ನಿರ್ಧರಿಸಲಾಗಿದ್ದು, ಎಲ್ಲರಿಗೂ ಹಕ್ಕು ಪತ್ರವಿತರಣೆ ಮಾಡಲಾಗುವುದು ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಘೋಷಿಸಿದರು.
ಚಿಕ್ಕಬಳ್ಳಾಪುರ ತಾಲೂಕಿನ ಕಮ್ಮಗುಟ್ಟಹಳ್ಳಿ ಸೇರಿದಂತೆ ಹಲವು ಗ್ರಾಪಂಗಳ ಗ್ರಾಮಸಭೆಗಳಲ್ಲಿ ಭಾಗವಹಿಸಿದ ಸಚಿವರು, ಪ್ರತಿ ಗ್ರಾಮಕ್ಕೂ ಅಗತ್ಯವಿರುವ ನಿವೇಶನಗಳನ್ನು ಹಂಚಲು ಈಗಾಗಲೇ ಜಮೀನು ಗುರ್ತಿಸಲಾಗಿದ್ದು, ಅವುಗಳನ್ನು ಫೆಬ್ರವರಿ ಅಂತ್ಯದೊಳಗೆ ವಿತರಿಸುವ ಮೂಲಕ ಪ್ರತಿಯೊಬ್ಬರಿಗೂ ಸೂರು ನೀಡುವುದಾಗಿ ಘೋಷಿಸಿದರು.

1 ಸಾವಿರ ನಿವೇಶನ ಹಂಚಿಕೆ 
ಕಮ್ಮಗುಟ್ಟಹಳ್ಳಿ ಗ್ರಾಪಂನಲ್ಲಿ ಒಟ್ಟು 1,027 ಕುಟುಂಬಗಳಿಗೆ ನಿವೇಶನದ ಅಗತ್ಯವಿದೆ ಎಂದು ಈಗಾಗಲೇ ಬೇಡಿಕೆ ಬಂದಿದ್ದು, ಇದಕ್ಕಾಗಿ ಗ್ರಾಪಂ ವ್ಯಾಪ್ತಿಯ 20 ಎಕರೆ ಜಮೀನು ಈಗಾಗಲೇ ಗುರ್ತಿಸಲಾಗಿದೆ. ಇದರಲ್ಲಿ 976 ನಿವೇಶನಗಳನ್ನು ಆಯ್ಕೆ ಮಾಡಿ ಹಂಚಿಕೆ ಮಾಡಲಾಗುವುದು. ಮುಂದಿನ ಸಭೆಯಲ್ಲಿಯೇ ಎಲ್ಲರಿಗೂ ಹಕ್ಕುಪಪತ್ರ ವಿತರಣೆ ಮಾಡಲಾಗುವುದು ಎಂದರು.
ಇದು ಸಂಪೂರ್ಣ ಉಚಿತವಾಗಿ ನೀಡುವ ನಿವೇಶನವಾಗಿದೆ. ಯಾರೇ ಹಣ ಕೇಳಿದರೂ ತಮ್ಮ ಗಮನಕ್ಕೆ ತರಬೇಕು. ಅಧಿಕಾರಿಗಳಾಗಲೀ, ನಾಯಕರಾಗಲೀ ಹಣ ನೀಡಬೇಕಿಲ್ಲ ಎಂದು ಸಚಿವರು ತಿಳಿಸಿದರು.
 ಈಗಾಗಲೇ ಈ ಗ್ರಾಪಂನಲ್ಲಿ 40 ಮನೆ ವಿತರಿಸಲಾಗಿದೆ. ಇದರಲ್ಲಿ 20 ಮನೆ ನಿರ್ಮಾಣ ಪೂರ್ತಿಯಾಗಿದೆ, ಉಳಿದ 20 ಮನೆಗಳ ಕಾಮಗಾರಿ ಪ್ರಗತಿಯಲ್ಲಿದೆ. ಇದರ ಜೊತೆಗೆ ಹೆಚ್ಚುವರಿಯಾಗಿ 100 ಮನೆ ವಿತರಿಸಲಾಗುತ್ತಿದೆ ಎಂದು ಸಚಿವರು ಘೋಷಿಸಿದರು.ಪ್ರತಿ ಗ್ರಾಮದ ಜನಸಂಖ್ಯೆಗೆ ಅನುಗುಣವಾಗಿ ಮನೆಗಳನ್ನು ವಿತರಿಸಲಾಗುವುದು. ಈ ಗ್ರಾಪಂನಲ್ಲಿ 319 ಮನೆಗಳಿಗೆ ಬೇಡಿಕೆ ಇದ್ದು, ಇದರಲ್ಲಿ ಈಗ ಮಂಜೂರಾಗಿರುವ 100 ಮನೆಗಳನ್ನು ಲಾಟರಿ ಮೂಲಕ ಪಾರದರ್ಶಕವಾಗಿ ಆಯ್ಕೆ ಮಾಡಿ ವಿತರಿಸಲಾಗುವುದು ಎಂದು ತಿಳಿಸಿದರು.
 ಎಲ್ಲ ಗ್ರಾಪಂಗಳಿಗೂ ಭೇಟಿ 
ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಎಲ್ಲ ಗ್ರಾಪಂಗಳಿಗೂ ಭೇಟಿ ನೀಡಲಾಗುವುದು. ಎಲ್ಲ ಗ್ರಾಮಗಳ ನಿವೇಶನ ರಹಿತರ ಪಟ್ಟಿ ಈಗಾಗಲೇ ಪಡೆಯಲಾಗಿದ್ದು, ಇದಕ್ಕೆ ಅನುಗುಣವಾಗಿ ಎಲ್ಲರಿಗೂ ಉಚಿತ ನಿವೇಶನ ಹಂಚಿಕೆ ಮಾಡಲಾಗುವುದು. ಫೆಬ್ರವರಿ ಅಂತ್ಯದೊಳಗೆ ನಿವೇಶನ ಹಕ್ಕುಪತ್ರ ವಿತರಿಸಲಾಗುವುದು. ಮುಂದಿನ 20 ದಿನಗಳಲ್ಲಿ ಮನೆಗಳ ಆದೇಶಪತ್ರ ವಿತರಿಸಲಾಗುವುದು. ಇದರ ಸಂಪೂರ್ಣ ಸದ್ಬಳಕೆ ಮಾಡಿಕೊಂಡು ಮನೆಗಳನ್ನು ನಿರ್ಮಿಸಿಕೊಳ್ಳುವಂತೆ ಸಚಿವರು ಸಲಹೆ ನೀಡಿದರು.
ಪ್ರತಿ ಗ್ರಾಪಂನಲ್ಲೂ ಶುದ್ಧ ನೀರಿನ ಘಟಕ 
ಪ್ರತಿ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಲಾಗುವುದು, ಮೊಬೈಲ್ ಕ್ಲಿನಿಕ್ ಈಗಾಗಲೇ ಆರಂಭಿಸಲಾಗಿದ್ದು, ಪ್ರತಿಯೊಬ್ಬರೂ ಉಚಿತ ತಪಾಸಣೆ, ಉಚಿತ ಚಿಕಿತ್ಸೆ ಮತ್ತು ಉಚಿತ ಔಷಧಗಳನ್ನು ಪಡೆದು ಆರೋಗ್ಯವಂತರಾಗಿರಬೇಕು ಎಂದು ಸಚಿವರು ಸಲಹೆ ನೀಡಿದರು.
ಕ್ಷೇತ್ರದಲ್ಲಿ ಗುಣಮಟ್ಟದ ರಸ್ತೆಗಳ ನಿರ್ಮಾಣವಾಗಿದೆ, ಗ್ರಾಮಗಳ ಚರಂಡಿಗಳ ಸ್ವಚ್ಛತೆಗೆ ಗ್ರಾಪಂಗಳು ಗಮನ ಹರಿಸಬೇಕು, ಹಿರೇನಾಗವಲ್ಲಿ ಗ್ರಾಮಕ್ಕೆ ನಿವೇಶನ ಹಂಚಿಕೆಗೆ 2 ಎಕರೆ ಭೂಮಿ ಗುರ್ತಿಸಲು ಸೂಚಿಸಲಾಗಿದೆ ಎಂದರು.
 ನಿವೇಶನ, ಮನೆ, ನೀರು, ರಸ್ತೆ ಸೇರಿದಂತೆ ಎಲ್ಲ ಮೂಲ ಸೌಲಭ್ಯ ಒದಗಿಸುವುದು ನನ್ನ ಜವಾಬ್ದಾರಿ, ಮುಂದಿನ ದಿನಗಳಲ್ಲಿ ಕೈಗಾರಿಕೆಗಳ ಸ್ಥಾಪನೆ ಮಾಡಲಾಗುವುದು, ದುಡಿಯುವ ಕೈಗಳಿಗೆ ಕೆಲಸ ನೀಡಲಾಗುವುದು ಎಂದರು.
ದೊಡ್ಡಪೈಲಗುರ್ಕಿ ಬಳಿ ಬೂದುಗುಂಡ್ಲ ಬ್ಯಾರೇಜ್ 50 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಇದರಿಂದ ಈ ಪ್ರದೇಶಕ್ಕೆ ಶುದ್ಧ ಕುಡಿಯುವ ನೀರು ಲಭ್ಯವಾಗಲಿದೆ. ಪ್ರತಿ ಮನೆಗೂ ಕೊಳಾಯಿ ಮೂಲಕ ನೀರು ನೀಡಲಾಗುವುದು, ಕ್ಷೇತ್ರದಾದ್ಯಂತ ಸಮಾನವಾಗಿ ಅಭಿವೃದ್ಧಿ ಮಾಡಲಾಗುತ್ತಿದೆ, ವರ್ಷಕ್ಕೆ ಒಮ್ಮೆಯಾದರೂ ಪ್ರತಿಯೊಬ್ಬರೂ ಆರೋಗ್ಯ ತಪಾಸಣೆ ಮಾಡಿಸಿಕೊಲ್ಳಬೇಕು ಎಂದು ಸಚಿವರು ಸೂಚಿಸಿದರು.
 *ಫೆಬ್ರವರಿಗೆ ಉಚಿತ ನಿವೇಶನದ ಹಕ್ಕುಪತ್ರ ವಿತರಣೆ* 
ಕಳೆದ ಹಲವು ವರ್ಷಗಳಿಂದ ನಿರಂತರವಾಗಿ ನಡೆಸುತ್ತಿದ್ದ ಸಂಕ್ರಾಂತಿ ಸುಗ್ಗಿ ಕಾರ್ಯಕ್ರಮ ಕೋವಿಡ್ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದು, ಪ್ರಸ್ತುತ ವರ್ಷ ಇದು ಪುನರಾರಂಭವಾಗಲಿದೆ ಎಂದು ಸಚಿವರು ಘೋಷಿಸಿದರು.
 ಜ.14ರಂದು ಕ್ಷೇತ್ರದಲ್ಲಿ ಮಹಿಳೆಯರಿಗಾಗಿಯೇ ರಂಗೋಲಿ  ಸ್ಪರ್ಧೆಯನ್ನು ಏರ್ಪಡಿಸಲಾಗಿದ್ದು, ಈ ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲ ಮಹಿಳೆಯರಿಗೂ ಮೂರು ಬರ್ನಲ್ ಇರುವ ಗ್ಯಾಸ್ ಸ್ಟೌವ್ ವಿತರಿಸಲಾಗುವುದು. ಜೊತಗೆ ವಿಜೇತರಿಗೆ ವಿಶೇಷ ಬಹುಮಾನಗಳನ್ನೂ ನೀಡಲಾಗುವುದು ಎಂದು ಸಚಿವರು ಹೇಳಿದರು.
ಕಾರ್ಯಕ್ರಮದಲ್ಲಿ ಪ್ರಕಾಶ್, ಜಯಪ್ಪ, ಸುಬ್ಬರಾಯಪ್ಪ, ನಾಗಭೂಷಣ್,, ನಾಗರಾಜ್ ತಹಸೀಲ್ದಾರ್ ಗಣಪತಿ ಶಾಸ್ತ್ರಿ ಸೇರಿದಂತೆ ಇತರರು ಇದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments