Thursday, April 25, 2024
spot_img
HomeChikballapur760 ಮನೆಗಳ ಆದೇಶಪತ್ರ ನಾನಾ ಸವಲತ್ತುಗಳನ್ನು ವಿತರಿಸಿದ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ನಿಮ್ಮ...

760 ಮನೆಗಳ ಆದೇಶಪತ್ರ ನಾನಾ ಸವಲತ್ತುಗಳನ್ನು ವಿತರಿಸಿದ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ನಿಮ್ಮ ಮನದಲ್ಲಿ ಸ್ಥಾನ ನೀಡುವುದು ಮರೆಯಬೇಡಿ

ಪಾಲಾರ್ ಪತ್ರಿಕೆ | Palar Patrike

ಚಿಕ್ಕಬಳ್ಳಾಪುರ: ನಗರ ವ್ಯಾಪ್ತಿಯ 760 ಮಂದಿ ಬಡವರಿಗೆ ಒಂದೇ ವೇದಿಕೆಯಲ್ಲಿ ಮನೆ ನಿರ್ಮಾಣದ ಆದೇಶಪತ್ರಗಳನ್ನು ವಿತರಿಸುತ್ತಿರುವುದು ಸಂತಸ ತಂದಿದ್ದು, ನಿಮ್ಮ ಮನೆಗಳಲ್ಲಿ ಬೇಡ ನಿಮ್ಮ ಮನಗಳಲ್ಲಿ ನಮಗೆ ಸ್ಥಾನ ನೀಡುವಂತೆ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಮನವಿ ಮಾಡಿದರು.ನಗರಸಭೆ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ವಸತಿ ಫಲಾನುಭವಿಗಳಿಗೆ ಆದೇಶಪತ್ರ ವಿತಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಆಧುನಿಕ ನಾಗರಿಕ ಸಮಾಜದಲ್ಲಿಯೂ ವಸತಿ ವಂಚಿತ ಜನರಿರುವುದು ಸಮಾಜಕ್ಕೆ, ನಾಗರಿಕತೆಗೆ ಮತ್ತು ಪ್ರಜಾಪ್ರಭುತ್ವದ ಸೋಲು ಎಂದರೆ ತಪ್ಪಾಗದು. ವಸತಿ ವಂಚಿತರೆಲ್ಲರಿಗೂ ವಸತಿ ವಿತರಿಸುವುದು ಬಿಜೆಪಿ ನೇತೃತ್ವದ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಪ್ರಮುಖ ಗುರಿಯಾಗಿದೆ ಎಂದರು.
15 ಸಾವಿರ ಉಚಿತ ನಿವೇಶನ
ಕಳೆದ ಮೂರು ವರ್ಷಗಳಿಂದ ಬಡವರಿಗೆ ವಸತಿ ಕಲ್ಪಿಸಲು ಆದ್ಯತೆ ಮೇರೆಗೆ ಶ್ರಮಿಸುತ್ತಿದ್ದೇನೆ, ಗ್ರಾಮೀಣ ಪ್ರದೇಶದಲ್ಲಿಯೂ ನಿವೇಶನಗಳಿಲ್ಲದ ಜನರಿದ್ದಾರೆ, ಈವರೆಗೆ 10 ಸಾವಿರ ನಿವೇಶನಗಳನ್ನು ಗ್ರಾಮೀಣ ಪ್ರದೇಶದಲ್ಲಿ ಗುರ್ತಿಸಲಾಗಿದೆ. ಜಿಪಂ ಸಿಇಒ ನೇತೃತ್ವದಲ್ಲಿ ಗ್ರಾಮೀಣ ಪ್ರದೇಶದಲ್ಲಿ ನಿವೇಶನ ಹಂಚಿಕೆಯನ್ನು ಜನವರಿ ವೇಳೆಗೆ ಮಾಡಲಾಗುವುದು ಎಂದರು.ನಗರ ವ್ಯಾಪ್ತಿಯಲ್ಲಿ 5 ಸಾವಿರ ನಿವೇಶಕ್ಕಾಗಿ ಭೂಮಿ ಸಿದ್ಧವಾಗುತ್ತಿದೆ, ಫೆಬ್ರವರಿ ವೇಳೆಗೆ ನಿವೇಶನಗಳನ್ನು ನಗರ ಜನರಿಗೆ ನೀಡಲಾಗುವುದು, 760 ಕುಟುಂಬಗಳಿಗೆ ಮನೆ ನೀಡುವ ಅವಕಾಶ ಸಿಕ್ಕಿರುವುದು ಸಂತಸದ ವಿಷಯವಾಗಿದೆ. ಆದಷ್ಟು ಶೀಘ್ರದಲ್ಲಿ ಕೊಳಚೆ ಪ್ರದೇಶದಲ್ಲಿ ವಾಸ ಮಾಡುವ ನಿವಾಸಿಗಳು ಸುಂದರ ಮತ್ತು ಸುಸಜ್ಜಿತ ಮನೆಗಳಲ್ಲಿ ವಾಸ ಮಾಡಲಿದ್ದಾರೆ ಎಂದು ಹೇಳಿದರು.ಪ್ರಧಾನಮಂತ್ರಿಗಳ ಆವಾಸ್ ಯೋಜನೆಯಲ್ಲಿ ದೇಶದ ಪ್ರತಿ ಬಡವನಿಗೂ ಮನೆ ನೀಡುವುದು ಕೇಂದ್ರ ಸರ್ಕಾರದ ನಿಯಮ, ನಗರದ ಎಲ್ಲ ಕೊಳಚೆ ಪ್ರದೇಶಗಳಿಗೂ ಮನೆಗಳನ್ನು ಆದ್ಯತೆ ಮೇರೆಗೆ ಹಂಚಲಾಗಿದೆ. ಪರಿಶಿಷ್ಟರ ಮತ್ತು ಹಿಂದುಳಿದವರ ವಿರೋಧಿ ಬಿಜೆಪಿ ಎಂದು ಆರೋಪಿಸುವ ಕಾಂಗ್ರೆಸ್ ಗರಿಗೆ ತಿಳಿಸಿ ಪ್ರಸ್ತುತ ವಿತರಿಸುತ್ತಿರುವ ಮನೆಗಳಲ್ಲಿ ಪರಿಶಿಷ್ಟ ಜಾತಿಗೆ 289 ಮನೆ, ಅಲ್ಪಸಂಖ್ಯಾತರಿಗೆ 234 ಮನೆ, ಹಿಂದುಳಿದ ವರ್ಗಗಳಿಗೆ 201 ಮನೆ ನೀಡಲಾಗಿದೆ ಎಂದರು.ಬಿಜೆಪಿಯಲ್ಲಿ ಯಾವುದೇ ಜಾತಿ ನೋಡಿ ಯೋಜನೆ ವಿತರಿಸುವುದಿಲ್ಲ ಬದಲಿಗೆ ಬಡತನ ನೋಡಿ ಆದ್ಯತೆಯ ಮೇರೆಗೆ ಸೌಲಭ್ಯಗಳನ್ನು ನೀಡಲಾಗುತ್ತದೆ. ಆದರೆ ಹಿಂದುಳಿದ ನಾಯಕ ಎಂದು ಹೇಳಿಕೊಳ್ಳುವ ನಾಯಕ ಕಾಂಗ್ರೆಸ್ ನಲ್ಲಿದ್ದಾರೆ. ಆದರೆ ನಿಜವಾದ ಹಿಂದುಳಿದವರ ನಾಯಕ ಪ್ರಧಾನಿ ನರೇಂದ್ರಮೋದಿ ಅವರು ಒಮ್ಮೆಯೂ ತಾವು ಹಿಂದುಳಿದವರ ನಾಯಕ ಎಂದು ಹೇಳಿಲ್ಲ ಎಂದರು.
ನಾನಾ ಅಭಿವೃದ್ಧಿಗೆ ನಾಂದಿ
ಶನಿವಾರ ಮನೆ ನಿರ್ಮಾಣ ಆದೇಶಪತ್ರಗಳೂ ಸೇರಿದಂತೆ ಅನೇಕ ಯೋಜನೆಗಳ ಫಲಾನುಭವಿಗಳಿಗೆ ಆರೋಗ್ಯ ಸಚಿವರು ವಿವಿಧ ಆದೇಶಪತ್ರಗಳನ್ನು ನೀಡಿದರು. 32 ಅಮೃತ ಸ್ವ ಸಹಾಯ ಸಂಘಗಳಿಗೆ 1 ಲಕ್ಷ ಮೌಲ್ಯದ ಚೆಕ್ ವಿತರಣೆ, ನಗರಸಭೆಯಿಂದ ಸ್ವಚ್ಛ ಭಾರತ್ ನಡಿ 4 ಕಸ ಸಂಗ್ರಹ ವಾಹನಗಳಿಗೆ ಚಾಲನೆ, ಗಂಗಾ ಕಲ್ಯಾಣ ಯೋಜನೆಯಡಿ 34 ಫಲಾನುಭವಿಗಳಿಗೆ ಮೋಟಾರ್ ಪಂಪ್ ವಿತರಣೆ, ಎಸ್ ಸಿ, ಎಸ್ ಟಿ ವರ್ಗದ 27 ಉನ್ನತ ಶಿಕ್ಷಣ ವಿದ್ಯಾರ್ಥಿಗಳಿಗೆ  ಲ್ಯಾಪ್ ಟಾಪ್ ವಿತರಣೆ, ವಾಜಪೇಯಿ ವಸತಿ ಯೋಜನೆಯಡಿ 61 ಫಲಾನುಭವಿಗಳಿಗೆ ಮನೆ ಆದೇಶ ಪತ್ರ ವಿತರಣೆ, ವಿಕಲ ಚೇತನ ಇಲಾಖೆಯಿಂದ 9 ಮಂದಿ ವಿಕಲಚೇತನರಿಗೆ ತ್ರಿಚಕ್ರ ವಾಹನ ವಿತರಣೆ, ಸಾಮಾಜಿಕ ಭದ್ರತಾ ಯೋಜನೆಯಡಿ ಪಿಂಚಣಿ ಆದೇಶಪತ್ರಗಳನ್ನು ಸಚಿವರು ಇದೇ ಸಂದರ್ಭದಲ್ಲಿ ವಿತರಿಸಿದರು. ಜೊತೆಗೆ ರೆಡ್ ಕ್ರಾಸ್ ನಿಂದ 40 ಲಕ್ಷ ವೆಚ್ಚದ ಸಂಚಾರಿ ಆರೋಗ್ಯ ವಾಹನಕ್ಕೆ ಚಾಲನೆ, 2.72 ಕೋಟಿ ವೆಚ್ಚದ ಪೊಲೀಸ್ ಸಮುದಾಯ ಭವನ ಉದ್ಘಾಟನೆ, ನಗರ ವ್ಯಾಪ್ತಿಯಲ್ಲಿ ನೀರಿನ ಪೈಪ್ ಲೈನ್ ಅಳವಡಿಕೆಗೆ 50 ಲಕ್ಷ ವೆಚ್ಚದಲ್ಲಿ ಭೂಮಿ ಪೂಜೆ, ನಗರ ವ್ಯಾಪ್ತಿಯಲ್ಲಿ ಸಿಸಿ ರಸ್ತೆ ಮತ್ತು ಚರಂಡಿ ನಿರ್ಮಾಣಕ್ಕೆ 60 ಲಕ್ಷ ವೆಚ್ಚದ ಕಾಮಗಾರಿಗೆ ಚಾಲನೆ ಸೇರಿದಂತೆ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಸಚಿವರು ಚಾಲನೆ ನೀಡಿದರು.ಕೊಳಚೆ ಪ್ರದೇಶದ ನಿವಾಸಿಗಳು ಆದಷ್ಟು ಶೀಘ್ರದಲ್ಲಿ ಮನೆಗಳನ್ನು ನಿರ್ಮಿಸಿಕೊಂಡು, ಶೀಘ್ರದಲ್ಲಿಯೇ ಗೃಹಪ್ರವೇಶ ನಡೆಯಲಿ ಎಂದು ಹಾರೈಸಿದ ಸಚಿವರು, ನಿಮ್ಮ ಮನೆಗಳಲ್ಲಿ ಸ್ಥಾನ ಬೇಡ, ನಿಮ್ಮ ಮನಗಳಲ್ಲಿ ಸ್ಥಾನ ನೀಡಿ ಎಂದು ಮನವಿ ಮಾಡಿದರು. ಅಲ್ಲದೆ ಸಚಿವರ ಭಾಷಣದ ವೇಳೆ ಪಕ್ಕದಲ್ಲಿಯೇ ಇದ್ದ ಮಸೀದಿಯಿಂದ ಅಜಾನ್ ಕೂಗುವ ಶಬ್ದ ಬರುತ್ತಿದ್ದಂತೆ ಸಚಿವರು ವೇದಿಕೆಯಲ್ಲಿ ಭಾಷಣ ನಿಲ್ಲಿಸಿ ಪ್ರಾರ್ಥನೆ ಮುಗಿದ ನಂತರ ಭಾಷಣ ಮುಂದುವರಿಸಿದರು.ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷ ಕೆ.ವಿ. ನಾಗರಾಜ್, ಬಿಎಂಟಿಸಿ ಉಪಾಧ್ಯಕ್ಷ ಕೆ.ವಿ. ನವೀನ್ ಕಿರಣ್, ನಗರಸಭಾ ಅಧ್ಯಕ್ಷ ಆನಂದರೆಡ್ಡಿ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮರಳುಕುಂಟೆ ಕೃಷ್ಣಮೂರ್ತಿ, ರಾಮಸ್ವಾಮಿ, ಮೋಹನ್, ನಾರಾಯಣಸ್ವಾಮಿ, ಪ್ರಸಾದ್, ಆನಂದಮೂರ್ತಿ, ಇಂತಿಯಾಜ್, ಎಸ್.ಆರ್.ಎಸ್. ದೇವರಾಜ್ ಸೇರಿದಂತೆ ನಗರಸಭೆ ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments