Thursday, March 28, 2024
spot_img
HomeChikballapurವಿಶೇಷ ಚೇತನರ ಸಬಲೀಕರಣಕ್ಕಾಗಿ ಜಿಲ್ಲಾ ಉಸ್ತುವಾರಿ ಸಚಿವ ಎನ್. ನಾಗರಾಜ್ ...

ವಿಶೇಷ ಚೇತನರ ಸಬಲೀಕರಣಕ್ಕಾಗಿ ಜಿಲ್ಲಾ ಉಸ್ತುವಾರಿ ಸಚಿವ ಎನ್. ನಾಗರಾಜ್ ಮನವಿ

ಪಾಲಾರ್ ಪತ್ರಿಕೆ | Palar Patrike

ಚಿಕ್ಕಬಳ್ಳಾಪುರ: ವಿಶೇಷ ಚೇತನರ ಸಬಲೀಕರಣಕ್ಕಾಗಿ ಸರ್ಕಾರ ಹಲವಾರು ಸವಲತ್ತುಗಳನ್ನು ನೀಡುತ್ತಾ ಬಂದಿದೆ. ಅವುಗಳೆಲ್ಲವನ್ನೂ ತಾವೆಲ್ಲರೂ ಸದುಪಯೋಗಪಡಿಸಿಕೊಂಡು ಸಮಾಜದ ಮುಖ್ಯವಾಹಿನಿಯಲ್ಲಿ ಗುರ್ತಿಸಿಕೊಳ್ಳುವಂತಾಗಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ  ಹಾಗೂ  ಪೌರಾಡಳಿತ  ಮತ್ತು  ಸಣ್ಣ ಕೈಗಾರಿಕೆಗಳ ಸಚಿವ ಎನ್.ನಾಗರಾಜ್ ರವರು ಹೇಳಿದರು.

ನಗರದ ಜಿಲ್ಲಾಪತ್ರಕರ್ತರ ಭವನದಲ್ಲಿ ಜಿಲ್ಲಾಡಳಿತದಿಂದ ಆಯೋಜಿಸಿದ್ದ ವಿಶ್ವ ವಿಕಲಚೇತನರ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡುತ್ತಾ ಶೇ. 75ರಷ್ಟು ವೈಕಲ್ಯತೆ ಹೊಂದಿರುವವರಿಗೆ ಉಚಿತವಾಗಿ ಯಂತ್ರಚಾಲಿತ ದ್ವಿಚಕ್ರ ವಾಹನಗಳನ್ನು ಜಿಲ್ಲೆಯಲ್ಲಿ ವಿತರಿಸಲಾಗುತ್ತಿದೆ. ಬಾಕಿ ಇರುವ 81 ಅರ್ಜಿದಾರರಿಗೂ ಸಹ ಶೀಘ್ರದಲ್ಲೇ ವಿತರಿಸುವ ವ್ಯವಸ್ಥೆ ಆಗಲಿದೆ. ಜಿಲ್ಲೆಯಲ್ಲಿ 14, 777 ವಿಕಲಚೇತನರು ಮಾಸಿಕ 1, 400 ರೂ ,  8, 160 ವಿಕಲಚೇತನರು ಮಾಸಿಕ 800 ರೂ ಹಾಗೂ 1, 832 ವಿಕಲಚೇತನರು ಮಾಸಿಕ 2, 000 ರೂಗಳ ಪಿಂಚಣಿ ಪಡೆಯುತ್ತಿದ್ದಾರೆ. ವಿಕಲಚೇತನ ವ್ಯಕ್ತಿಯನ್ನು ವಿವಾಹವಾಗುವವರಿಗೆ 50, 000 ರೂಗಳ ವಿವಾಹ ಪ್ರೋತ್ಸಾಹಧನವನ್ನು 6 ಫಲಾನುಭವಿಗಳಿಗೆ ವಿತರಿಸಲಾಗಿದೆ. ನಿರುದ್ಯೋಗಿ ವಿಕಲಚೇತನರಿಗೆ ಮಾಸಿಕ 1, 000 ರೂ ನಿರುದ್ಯೋಗ ಭತ್ಯೆಯನ್ನು ನೀಡಲಾಗುತ್ತಿದೆ. ಜಿಲ್ಲೆಯಲ್ಲಿ ವಿಶೇಷ ಚೇತನ ಮಕ್ಕಳಿಗಾಗಿ 2 ವಿಶೇಷ ಶಾಲೆಗಳನ್ನು ಖಾಸಗಿ ಸಹಭಾಗಿತ್ವದಲ್ಲಿ ನಡೆಸಲಾಗುತ್ತಿದೆ . ಇಷ್ಟೆಲ್ಲ ಸವಲತ್ತುಗಳನ್ನು ಸದ್ವಿನಿಯೋಗ ಪಡಿಸಿಕೊಳ್ಳುವಂತೆ ಅವರು ಮನವಿ ಮಾಡಿದರು.ಈ ವೇಳೆ ಸಚಿವರು ಶ್ರವಣದೋಷವುಳ್ಳ ವಿಶೇಷ ಚೇತನರಿಗೆ ಶ್ರವಣಸಾಧನವನ್ನು ಖುದ್ದು ಅಳವಡಿಸಿ ಶ್ರವಣಸಾಧನ ವಿತರಣೆ ಕಾರ್ಯಕ್ರಮಕ್ಕೆ  ಚಾಲನೆ ನೀಡಿದರು.ಅಗತ್ಯವಿರುವವರಿಗೆ ಯಂತ್ರಚಾಲಿತ ದ್ವಿಚಕ್ರ ವಾಹನ, ಊರುಗೋಲು (ಸ್ಟಿಕ್), ಬ್ರೈಲ್  ಕಿಟ್  ಸೇರಿದಂತೆ ವಿವಿಧ ಸಲಕರಣೆಗಳನ್ನು ವಿತರಿಸಿದರು. ವೇದಿಕೆಯಿಂದ ವಿಶೇಷಚೇತನರಿದ್ದಲ್ಲಿಗೆ ತೆರಳಿ ಅವರ ಸಮಸ್ಯೆಗಳನ್ನು, ಅಹವಾಲುಗಳನ್ನು ಆಲಿಸಿದರು. ವಿಶೇಷ ಚೇತನರ ಕಲ್ಯಾಣಕ್ಕಾಗಿ ಶ್ರಮಿಸುತ್ತಿರುವ ಸಂಘ, ಸಂಸ್ಥೆಗಳು ಹಾಗೂ ವ್ಯಕ್ತಿಗಳನ್ನು ಸನ್ಮಾನಿಸಿ ಗೌರವಿಸಿದರು. ವಿಶ್ವ ವಿಕಲಚೇತನರ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಪ್ರಶಸ್ತಿ ಪತ್ರ ವಿತರಿಸಿ ಸನ್ಮಾನಿಸಿದರು. 

ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಎನ್.ಎಂ ನಾಗರಾಜ್ ಅವರು ಮಾತನಾಡಿ ವಿಶೇಷ ಚೇತನರು ಅನುಭವಿಸುವ ಸಮಸ್ಯೆಗಳನ್ನು ನಿವಾರಿಸಿ ಸಬಲೀಕರಣ ಮಾಡುವ ಆಶಯದೊಂದಿಗೆ ವಿಶ್ವ ವಿಕಲಚೇತನರ ದಿನಾಚರಣೆಯನ್ನು ಆಚರಿಸಲಾಗುತ್ತದೆ. ತಾವೆಲ್ಲರೂ ಸರ್ಕಾರದ ಸೌಲಭ್ಯಗಳನ್ನು ಉಪಯೋಗಿಸಿಕೊಂಡು ಎಲ್ಲರಂತೆ ಸಹಜ ಜೀವನ ನಡೆಸಬೇಕೆಂದು ತಿಳಿಸಿದರು. 
ಕಾರ್ಯಕ್ರಮದಲ್ಲಿ ಶಿಡ್ಲಘಟ್ಟ ತಾಲೂಕಿನ ಎಂ ಆರ್ ಡಬ್ಲೂ ರಾಮಚಂದ್ರಪ್ಪ ಅವರು ಇಲಾಖೆಯಿಂದ ವಿಕಲಚೇತನರಿಗೆ  ಜಿಲ್ಲೆಯಲ್ಲಿ ದೊರೆತಿರುವ ಸೌಲಭ್ಯಗಳನ್ನು ವಿವರಿಸಿದರು. ವಿಶೇಷ ಚೇತನೆ ಕಿರಣ್ ಅವರು ಜಿಲ್ಲೆಯಲ್ಲಿ ಅಂಗವಿಕಲರ ಭವನ ಹಾಗೂ ಸರ್ಕಾರದಿಂದ ವಿಶೇಷ ಚೇತನರಿಗಾಗಿ ವಸತಿನಿಲಯ ಸ್ಥಾಪಿಸುವಂತೆ ಸಚಿವರಿಗೆ ಮನವಿ ಸಲ್ಲಿಸಿದರು. ಜೊತೆಗೆ ಜಿಲ್ಲೆಯಲ್ಲಿರುವ ಬಹುತೇಕ ಸರ್ಕಾರಿ ಕಚೇರಿಗಳು , ಬ್ಯಾಂಕ್  ಗಳು ಇತ್ಯಾದಿ ಶೇ.50ರಷ್ಟು ಸಾರ್ವಜನಿಕ ಕಟ್ಟಡಗಳಲ್ಲಿ ವಿಶೇಷ ಚೇತನರ ಅನುಕೂಲಕ್ಕಾಗಿ ರ್ಯಾಂಪ್ ವ್ಯವಸ್ಥೆಯನ್ನು ಮಾಡಿದ್ದು ಉಳಿದ ಕಟ್ಟಡಗಳಲ್ಲೂ ವಿಕಲಚೇತನರ ಅನುಕೂಲಕ್ಕಾಗಿ ರ್ಯಾಂಪ್ ಸೌಲಭ್ಯ ಒದಗಿಸಿಕೊಡಬೇಕೆಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪಿ.ಶಿವಶಂಕರ್ , ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಎಲ್ ನಾಗೇಶ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಅಶ್ವತ್ಥಮ್ಮ, ವಿಕಲಚೇತನರು ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಕಲ್ಯಾಣಾಧಿಕಾರಿ ಜ್ಯೋತಿ,  ವಿವಿಧ ಇಲಾಖೆಗಳ ಅಧಿಕಾರಿಗಳು, ಹಲವಾರು ಸರ್ಕಾರೇತರ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments