Thursday, March 28, 2024
spot_img
HomeChikballapurಚಿಕ್ಕಬಳ್ಳಾಪುರ ನಗರದಲ್ಲಿ ಐದು ಸಾವಿರ ಉಚಿತ ನಿವೇಶನ ಮಂಜೂರು

ಚಿಕ್ಕಬಳ್ಳಾಪುರ ನಗರದಲ್ಲಿ ಐದು ಸಾವಿರ ಉಚಿತ ನಿವೇಶನ ಮಂಜೂರು

ಪಾಲಾರ್ ಪತ್ರಿಕೆ | Palar Pathrike

ಚಿಕ್ಕಬಳ್ಳಾಪುರ: ಕಳೆದ ಮೂರು ವರ್ಷಗಳ ಹಿಂದೆ ನೀಡಿದ್ದ ಭರವಸೆಯಂತೆ ನಗರ ವ್ಯಾಪ್ತಿಯ 5 ಸಾವಿರ ನಿವೇಶನ ರಹಿತರಿಗೆ ಉಚಿತ ನಿವೇಶನ ನೀಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಹೇಳಿದರು.
ನಗರ ವ್ಯಾಪ್ತಿಯ ಬಡವರಿಗೆ ಉಚಿತ ನಿವೇಶನ ಹಂಚಿಕೆ ಹಿನ್ನೆಲೆಯಲ್ಲಿ ಆಯೋಜಿಸಿದ್ದ ವಾರ್ಡ್‌ ಸಭೆಯಲ್ಲಿ ಮಾತನಾಡಿದ ಅವರು, ಈ ಹಿಂದೆ ನಗರ ವ್ಯಾಪ್ತಿಯಿಂದ ಅರ್ಜಿ ಸಲ್ಲಿಸಿದ್ದವರಲ್ಲಿ 2,270 ಮಂದಿಗೆ ನಿವೇಶನ ಅಂತಿಮ ಮಾಡಲಾಗಿದೆ. ಇದರಲ್ಲಿ ಪರಿಶಿಷ್ಟ ಜಾತಿಯ 440, ಪರಿಶಿಷ್ಟ ವರ್ಗದ 113, ಹಿಂದುಳಿದ ವರ್ಗದ 842 ಮತ್ತು ಅಲ್ಪಸಂಖ್ಯಾತ 870 ಕುಟುಂಬಗಳಿಗೆ ನಿವೇಶನ ಮಂಜೂರಾಗಿದೆ. ಈ ಅಂಕಿ ಅಂಶ ನೋಡಿದರೆ ಸಾಮಾಜಿಕ ನ್ಯಾಯ ಏನು ಎಂಬುದು ಅರ್ಥವಾಗಲಿದೆ ಎಂದು ಸಚಿವರು ವಿವರಿಸಿದರು.
ಮೊದಲು ಅರ್ಜಿ ಸಲ್ಲಿಸಿದವರಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಅಲ್ಪಸಂಖ್ಯಾತರಿಗೆ ನಿವೇಶನ ನೀಡಲಾಗಿದ್ದು, ಯಾವುದೇ ಜಾತಿ ಅಥವಾ ಧರ್ಮದ ಜನರಿಗೆ ತಾರತಮ್ಯ ಮಾಡಿಲ್ಲ. ಇವುಗಳ ಜೊತೆಗೆ 2,700 ನಿವೇಶನ ಸಿದ್ಧವಾಗಿದ್ದು, ಅರ್ಜಿ ಸಲ್ಲಿಸಿದ ಎಲ್ಲರಿಗೂ ನಿವೇಶನ ಕಲ್ಪಿಸಲು ಕೊಟ್ಟ ಮಾತಿಗೆ ಬದ್ಧರಾಗಿರುವುದಾಗಿ ಅವರು ಹೇಳಿದರು.
ಅಲ್ಲದೆ ಪ್ರಸ್ತುತ ಸಾಲಿನಲ್ಲಿ ನಿವೇಶನ ಪಡೆಯುತ್ತಿರುವ ಎಲ್ಲರಿಗೂ ಮುಂದಿನ ವರ್ಷ ಮನೆ ನಿರ್ಮಿಸಿಕೊಡುವ ಪ್ರಯತ್ನ ಮಾಡಲಾಗುವುದು. ಈ ಹಿಂದೆ ಇದ್ದ ಯಾವುದೇ ಶಾಸಕರು ಈ ಪ್ರಮಾಣದಲ್ಲಿ ನಿವೇಶನ ನೀಡಿದ ಉದಾಹರಣೆ ಇಲ್ಲ. ಅಧಿಕಾರಿಗಳ ನಿರಂತರ ಶ್ರಮದಿಂದಲೇ ಇಂತಹ ಸಾಧನೆ ಮಾಡಲು ಸಾಧ್ಯವಾಗಿದ್ದು, ಸಹಕರಿಸಿದ ಎಲ್ಲರಿಗೂ ಅಭಿನಂದನೆ ಸಲ್ಲಿಸುವುದಾಗಿ ಸಚಿವರು ಹೇಳಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments