Friday, April 19, 2024
spot_img
HomeChikballapurಜಿಲ್ಲಾ ಕೇಂದ್ರದಲ್ಲಿ ದೋಬಿಘಾಟ್ ನಿರ್ಮಾಣಕ್ಕೆ 2 ಎಕರೆ ಭೂಮಿ*

ಜಿಲ್ಲಾ ಕೇಂದ್ರದಲ್ಲಿ ದೋಬಿಘಾಟ್ ನಿರ್ಮಾಣಕ್ಕೆ 2 ಎಕರೆ ಭೂಮಿ*

 ಶೀಘ್ರವೇ ಜಮೀನು ಗುರ್ತಿಸಲು ಜಿಲ್ಲಾಧಿಕಾರಿಗೆ ಸೂಚಿಸಿದ ಆರೋಗ್ಯ ಸಚಿವ ಡಾ.ಕೆ. ಸುಧಾಕರ್
 

ಚಿಕ್ಕಬಳ್ಳಾಪುರ : ಮಡಿವಾಳ ಸಮುದಾಯ ಶ್ರಮಿಕ ಸಮುದಾಯವಾಗಿದ್ದು, ಇಸ್ತ್ರೀ ಪೆಟ್ಟಿಗೆ ಸೇರಿದಂತೆ ಕಿಟ್ ನೀಡುವ ಜೊತೆಗೆ ದೋಬಿ ಘಾಟ್ ನಿರ್ಮಾಣಕ್ಕೆ ಎರಡು ಎಕರೆ ಜಾಗ ಗುರ್ತಿಸುವಂತೆ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಅವರು ಜಿಲ್ಲಾಕಾರಿಗಳಿಗೆ ಸೂಚಿಸಿದರು.
ನಗರದಲ್ಲಿ ಬುಧವಾರ ನಡೆದ ಮಡಿವಾಳ ಮಾಚಿದೇವರ ಜಯಂತ್ಯುತ್ಸವದಲ್ಲಿ ಮಾತನಾಡಿದ ಅವರು, ಬಲಹೀನ ವರ್ಗಗಳಿಗೆ ಬಲ ತುಂಬುವ ಕೆಲಸವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯ ಸರ್ಕಾರ ಮಾಡುತ್ತಿದ್ದು, 2019-2020ನೇ ಸಾಲಿನಲ್ಲಿ ಮಡಿವಾಳ ಅಭಿವೃದ್ಧಿ ನಿಗಮಕ್ಕೆ 25 ಕೋಟಿ ಅನುದಾನವನ್ನು ಸರ್ಕಾರದಿಂದ ನೀಡಲಾಗಿದೆ ಎಂದು ಹೇಳಿದರು.
ರಾಜ್ಯ ಸರ್ಕಾರದಿಂದ ನಿಗಮಕ್ಕೆ ನೀಡಿದ ಅನುದಾನದಲ್ಲಿ 4,843 ಫಲಾನುಭವಿಗಳು ನಾನಾ ಸೌಲಭ್ಯ ಪಡೆದಿದ್ದಾರೆ. ಜೊತೆಗೆ ಚಿತ್ರದುರ್ಗದಲ್ಲಿರುವ ಮಡಿವಾಳ ಮಹಾಸಂಸ್ಥಾನಕ್ಕೆ 3 ಕೋಟಿ ಅನುದಾನವನ್ನು ಮುಖ್ಯಮಂತ್ರಿಗಳು ನೀಡಿದ್ದಾರೆ. ಆ ಮೂಲಕ ಬಲಹೀನ ವರ್ಗಗಳಿಗೆ ಶಕ್ತಿ ತುಂಬುವ ಕೆಲಸವನ್ನು ಸರ್ಕಾರದಿಂದ ಮಾಡುತ್ತಿದ್ದು, ಜಿಲ್ಲೆಯಲ್ಲಿರುವ ಸಮುದಾಯದ ಅಭಿವೃದ್ಧಿಗಾಗಿ ಅಗತ್ಯ ಕ್ರಮ ವಹಿಸುವುದಾಗಿ ಅವರು ಹೇಳಿದರು.
 *ದೋಬಿಘಾಟ್ ನಿರ್ಮಾಣಕ್ಕೆ 2 ಎಕರೆ* 
ಮಡಿವಾಳ ಸಮುದಾಯ ಪರಿಶ್ರಮದ ಬದುಕು ಸಾಗಿಸುವ ಸಮುದಾಯವಾಗಿದ್ದು, ಶೀಘ್ರವೇ ಇಸ್ತ್ರೀ ಪೆಟ್ಟಿಗೆ ಸೇರಿದಂತೆ ಕಿಟ್ ನೀಡಲಾಗುವುದು. ಅಲ್ಲದೆ ಜಿಲ್ಲಾ ಕೇಂದ್ರದಲ್ಲಿ ದೋಬಿಘಾಟ್ ಇಲ್ಲವಾಗಿದ್ದು, ದೋಬಿಘಾಟ್ ನಿರ್ಮಾಣಕ್ಕೆ ಕನಿಷ್ಠ ಎರಡು ಎಕರೆ ಭೂಮಿ ಗುರ್ತಿಸುವಂತೆ ಜಿಲ್ಲಾಧಿಕಾರಿಗಳು ಮತ್ತು ತಹಸೀಲ್ದಾರ್ ಅವರಿಗೆ ಸಚಿವರು ಸೂಚಿಸಿದರು.
ಅಲ್ಲದೆ ಮಡಿವಾಳ ವಿದ್ಯಾರ್ಥಿನಿಲಯ ನಿರ್ಮಾಣ ಹಂತದಲ್ಲಿದ್ದು, ಅದಕ್ಕೆ ವೇಗ ಹೆಚ್ಚಿಸುವ ಕೆಲಸ ಮಾಡಲಾಗುವುದು. ಈಗಾಗಲೇ 25 ಲಕ್ಷ ವೆಚ್ಚದಲ್ಲಿ ವಿದ್ಯಾರ್ಥಿನಿಲಯ ಕಾಮಗಾರಿ ಆರಂಭಿಸಲಾಗಿದ್ದು, ಇನ್ನೂ 1.75 ಲಕ್ಷದ ಬೇಡಿಕೆಯನ್ನು ಸಮುದಾಯದಿಂದ ಬಂದ ಬೇಡಿಕೆಗೆ ಪ್ರತಿಕ್ರಿಯಿಸಿದ ಸಚಿವರು, ಶೀಘ್ರದಲ್ಲಿಯೇ ಕಾಮಗಾರಿ ವೇಗ ಹೆಚ್ಚಿಸಲು ಕ್ರಮ ವಹಿಸುವುದಾಗಿ ಭರವಸೆ ನೀಡಿದರು. ಅಲ್ಲದೆ ಈ ಸಮುದಾಯಕ್ಕೆ ರಾಜಕಾರಣದಲ್ಲಿ ಸ್ಥಾನಮಾನ ಕಲ್ಪಿಸಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಅವರು ಹೇಳಿದರು.
 *ಸರ್ವರಿಗೂ ಸಮಬಾಳು ನೀಡಿದ ಮಾಚಿದೇವರು* 
ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಒದಗಿಸಲು ಮಡಿವಾಳ ಮಾಚಿದೇವರು ಬಸವಣ್ಣನವರೊಂದಿಗೆ ಸೇರಿ ಸಾಮಾಜಿಕ ಕ್ರಾಂತಿ ಕೈಗೊಂಡಿದ್ದರು. ಶರಣರ ಅಗ್ರಗಣ್ಯ ಬಳಗದಲ್ಲಿ ದೊಡ್ಡ ಸ್ಥಾನ ಪಡೆದವರು ಮಾಚಿದೇವರು. ಕೋಮು ಶಕ್ತಿಗಳು ವಚನ ಸಾಹಿತ್ಯವನ್ನು ನಾಶಪಡಿಸುವ ಪ್ರಯತ್ನ ಮಾಡಿದಾಗ ಧೈರ್ಯದಿಂದ ಹೋರಾಟ ಮಾಡಿ ವಚನ ಸಾಹಿತ್ಯಕ್ಕೆ ಗಟ್ಟಿ ಬುನಾದಿ ಹಾಕಿದವರಲ್ಲಿ ಮಾಚಿದೇವರು ಅಗ್ರಗಣ್ಯರು ಎಂದು ಬಣ್ಣಿಸಿದರು.
ವಿಜಯಪುರದ ದೇವರಹಿಪ್ಪರಗಿ ಮಡಿವಾಳ ವಾಚಿದೇವರ ಜನ್ಮಸ್ಥಳವಾಗಿದ್ದು, ವೀರಭದ್ರನ ಅವತಾರ ಎಂದೂ ಹೇಳಲಾಗಿದೆ. 12ನೇ ಶತಮಾನದಲ್ಲಿ ಬಟ್ಟೆ ಶುಚಿ ಮಾಡುವ ಕಾಯಕ ಮಾಡುವ ಮಡಿವಾಳ ಸಮುದಾಯದವರ ಬಟ್ಟೆಯನ್ನು ಇವರು ಶುಚಿ ಮಾಡುತ್ತಿದ್ದರು. ಅದರಲ್ಲಿ ಸೋಮಾರಿಗಳಿದ್ದರೆ ಮಾಡುತ್ತಿರಲಿಲ್ಲ. ಆ ಮೂಲಕ ಶ್ರಮಕ್ಕೆ ಹೆಚ್ಚಿನ ಪ್ರಾತಿನಿಧ್ಯ ನೀಡುತ್ತಿದ್ದರು ಎಂದು ಹೇಳಿದರು.
 *ಸಕಾಲದಲ್ಲಿ ಜಿಲ್ಲೆ ದ್ವಿತೀಯ ಸ್ಥಾನ* 
ಸಕಾಲದಲ್ಲಿ ತಾವು ಉಸ್ತುವಾರಿ ವಹಿಸಿರುವ ಬೆಂಗಳೂರು ಗ್ರಾಮಾಂತರ ಜಿಲ್ಲೆ ಪ್ರಥಮ ಸ್ಥಾನ ಪಡೆದಿದ್ದು, ತಾವು ಪ್ರತಿನಿಸುತ್ತಿರುವ ಚಿಕ್ಕಬಳ್ಳಾಪುರ ಜಿಲ್ಲೆ ದ್ವಿತೀಯ ಸ್ಥಾನದಲ್ಲಿರುವುದು ಸಂತಸ ತಂದಿದೆ. ಮುಂದಿನ ದಿನಗಳಲ್ಲಿ ಜಿಲ್ಲೆ ಪ್ರಥಮ ಸ್ಥಾನ ಅಲಂಕರಿಸಬೇಕು ಎಂದು ಹೇಳಿದರು. 
ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷ ಕೆ.ವಿ. ನಾಗರಾಜ್, ನಗರಸಭೆ ಅಧ್ಯಕ್ಷ ಆನಂದರೆಡ್ಡಿ, ಚಿಕ್ಕಬಳ್ಳಾಪುರ ನಗರ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೃಷ್ಣಮೂರ್ತಿ, ಮಡಿವಾಳ ಸಂಘದ ಅಧ್ಯಕ್ಷ ಮುನಿನಾರಾಯಣಪ್ಪ, ಉಪಾಧ್ಯಕ್ಷ ಪ್ರಭಾಕರ್, ಜಿಲ್ಲಾಧಿಕಾರಿ ನಾಗರಾಜ್, ಜಿಪಂ ಸಿಇಒ ಶಿವಶಂಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾಗೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments