Friday, March 29, 2024
spot_img
HomeChamarajanagarಗ್ರಂಥಾಲಯಗಳಲ್ಲಿ ಮಕ್ಕಳ ಮಾನಸಿಕ ಬೆಳವಣಿಗೆಗೆ ಪೂರಕವಾದ ಪುಸ್ತಕಗಳನ್ನಿಡಿ : ಜಿಲ್ಲಾ ಪಂಚಾಯಿತಿ. ಆಡಳಿತಾಧಿಕಾರಿ ಬಿ.ಬಿ. ಕಾವೇರಿ

ಗ್ರಂಥಾಲಯಗಳಲ್ಲಿ ಮಕ್ಕಳ ಮಾನಸಿಕ ಬೆಳವಣಿಗೆಗೆ ಪೂರಕವಾದ ಪುಸ್ತಕಗಳನ್ನಿಡಿ : ಜಿಲ್ಲಾ ಪಂಚಾಯಿತಿ. ಆಡಳಿತಾಧಿಕಾರಿ ಬಿ.ಬಿ. ಕಾವೇರಿ

  ಪಾಲಾರ್ ಪತ್ರಿಕೆ | Palar Pathrike

ಚಾಮರಾಜನಗರ: ಜಿಲ್ಲೆಯ ಪ್ರತಿ ಗ್ರಾಮ ಪಂಚಾಯಿತಿಗಳಲ್ಲಿನ ಗ್ರಂಥಾಲಯಗಳಲ್ಲಿ ಗ್ರಾಮೀಣ ಮಕ್ಕಳ ಮಾನಸಿಕ ಬೆಳವಣಿಗೆಗೆ ಪೂರಕವಾದ ಪುಸ್ತಕಗಳನ್ನು ಸಂಗ್ರಹಿಸಿಡಬೇಕು. ಅವು ಮಕ್ಕಳನ್ನು ಅಕರ್ಷಿಸಲಿವೆ ಎಂದು ಜಿಲ್ಲಾ ಪಂಚಾಯತ್ ಆಡಳಿತಾಧಿಕಾರಿ ಹಾಗೂ ಸಮಗ್ರ ಶಿಕ್ಷಣ ಕರ್ನಾಟಕದ ರಾಜ್ಯ ಯೋಜನಾ ನಿರ್ದೇಶಕರಾದ ಬಿ.ಬಿ. ಕಾವೇರಿ ಅವರು ತಿಳಿಸಿದರು.    
       ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾ ಪಂಚಾಯತಿಯಿಂದ ಹಮ್ಮಿಕೊಳ್ಳಲಾಗಿದ್ದ ಗ್ರಂಥಾಲಯ ಮೇಲ್ವಿಚಾರಕರಿಗೆ ಕಾರ್ಯಾಗಾರ ಹಾಗೂ ಉಪನ್ಯಾಸ ಮತ್ತು ಬೆಂಗಳೂರಿನ ಅಜೀಂ ಪ್ರೇಮ್‍ಜೀ ಪೌಂಡೇಷನ್‍ನಿಂದ ಪುಸ್ತಕ ವಿತರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 
ಜೀವನದಲ್ಲಿ ಉತ್ತಮ ಸಾಧನೆಗೈಯ್ಯಲು ಗ್ರಂಥಾಲಯಗಳು ಅಗತ್ಯವಾಗಿರುವುದರಿಂದ ಗ್ರಂಥಾಲಯಗಳ ಪ್ರಾಮುಖ್ಯತೆಯನ್ನು ಪ್ರತಿಯೊಬ್ಬರು ಅರಿಯಬೇಕು. ಈ ನಿಟ್ಟಿನಲ್ಲಿ ಜಿಲ್ಲಾ ಪಂಚಾಯತ್‍ನ 15ನೇ ಹಣಕಾಸು ಯೋಜನೆಯಡಿ ಗ್ರಾಮ ಪಂಚಾಯಿತಿಗಳಲ್ಲಿ ಗ್ರಂಥಾಲಯಗಳನ್ನು ಡಿಜಿಟಲಿಕರಣಗೊಳಿಸಲಾಗುತ್ತಿದೆ. ನಶಿಸುತ್ತಿರುವ ಪುಸ್ತಕ ಸಂಸ್ಕøತಿಗೆ ನವಚೈತನ್ಯ ತುಂಬಲು ಹಾಗೂ ಜಿಲ್ಲೆಯಲ್ಲಿ ಸಾಕ್ಷರತೆ ಪ್ರಮಾಣ ಹೆಚ್ಚಿಸಲು ಗ್ರಂಥಾಲಯಗಳ ಡಿಜಿಟಲೀಕರಣ ಕಾರ್ಯಕ್ರಮ ನೆರವಾಗಲಿದೆ ಎಂದರು.
      ಗ್ರಂಥಾಲಯಗಳ ಡಿಜಿಟಲಿಕರಣ ಕಾರ್ಯಕ್ಕೆ ಪೂರಕವಾಗಿ ಪುಸ್ತಕಗಳನ್ನು ಅಜೀಂ ಪ್ರೇಮಜೀ ಪೌಂಡೇಷನ್ ಕೊಡುಗೆಯಾಗಿ ನೀಡುತ್ತಿದೆ. ಇದು ಗ್ರಾಮೀಣ ಮಕ್ಕಳ, ಮಹಿಳೆಯರ, ಹಿರಿಯ ನಾಗರಿಕರ ಹಾಗೂ ವಿಕಲಚೇತನರ ಮಾನಸಿಕ, ಶೈಕ್ಷಣಿಕ ಬೆಳವಣಿಗೆಗೆ ಉತ್ತಮ ಅಡಿಪಾಯವಾಗಲಿದೆ. ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಕಟ್ಟಡ ಹಾಗೂ ರಸ್ತೆ ಕಾಮಗಾರಿಗಳ ಜೊತೆಗೆ ಆದ್ಯತೆ ಮೇರೆಗೆ ಆಯಾ ಶಾಲೆಯ ಶಿಕ್ಷಕರೊಂದಿಗೆ ಸಮನ್ವಯ ಸಾಧಿಸಿ ಗ್ರಂಥಾಲಯಗಳಿಗೆ ಮಕ್ಕಳನ್ನು ಹೆಚ್ಚಿನ ಸಂಖ್ಯೆಯಲ್ಲಿ ನೊಂದಣಿ ಮಾಡಿಸಬೇಕು. ಜಿಲ್ಲೆಯ ಅಭಿವೃದ್ಧಿಗೆ ಕಾರ್ಯಪ್ರವೃತ್ತರಾಗಬೇಕು ಎಂದು ಬಿ.ಬಿ. ಕಾವೇರಿ ಅವರು ತಿಳಿಸಿದರು. 
      ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ದೀನಬಂಧು ಸಂಸ್ಥೆಯ ಪ್ರೊ. ಜಿ.ಎಸ್. ಜಯದೇವ್ ಅವರು ಪುಸ್ತಕ ಜೀವನದ ಮೌಲ್ಯಗಳನ್ನು ತಿಳಿಸುತ್ತದೆ. ಪುಸ್ತಕದ ಒಡನಾಟದೊಂದಿಗೆ ಪ್ರತಿಯೊಬ್ಬರು ಗೌರವಯುತ ಜೀವನ ಕಟ್ಟಿಕೊಳ್ಳಬಹುದು. ಗ್ರಾಮೀಣರ ಬದುಕಿನಲ್ಲಿ ಎಲ್ಲವೂ ಇದೆ. ಆದರೂ ಇಕ್ಕಟ್ಟಿನಲ್ಲಿದೆ. ಪುಸ್ತಕ ಪ್ರೀತಿ ಕಡಿಮೆಯಾಗುತ್ತಿದೆ.  ಗ್ರಾಮೀಣ ಜನತೆ ಮೌಲ್ಯಯುತ ಪುಸ್ತಕಗಳು ಅಥವಾ ದಿನಪತ್ರಿಕೆಗಳನ್ನು ಓದುವ ಕನಿಷ್ಠ ಹವ್ಯಾಸ ಬೆಳೆಸಿಕೊಳ್ಳಬೇಕು. ಗ್ರಾಮಪಂಚಾಯತ್‍ಗಳಲ್ಲಿ ಗ್ರಂಥಾಲಯಗಳು ಸಮುದಾಯದ ಆಸ್ತಿಯಾಗಬೇಕು. ಡಿಜಿಟಲೀಕರಣ ಪ್ರಕ್ರಿಯೆ ಮಕ್ಕಳಲ್ಲಿ ಅದ್ಭುತ ಸೃಜನಶೀಲತೆ ಬೆಳೆಸಿ ಆರೋಗ್ಯಕರ ಪ್ರಭಾವ ಬೀರಲಿದೆ ಎಂದರು.
     ಸಾಹಿತಿಗಳು ಹಾಗೂ ನಿವೃತ್ತ ಪ್ರಾಧ್ಯಾಪಕರಾದ ಡಾ. ಕೃಷ್ಣಮೂರ್ತಿ ಹನೂರು ಅವರು ಉಪನ್ಯಾಸ ನೀಡಿ ಮಾತನಾಡಿ ಪುಸ್ತಕ ಮನಸ್ಸಿನ ಮಾಲಿನ್ಯವನ್ನು ತೊಡೆದು ಮನುಷ್ಯನನ್ನು ಶುದ್ಧನನ್ನಾಗಿಸುತ್ತದೆ. ಇಂದು ಯಾವುದೇ ಬಗೆಯ ಫ್ಯಾಷನ್‍ಗೆ ಎಲ್ಲರೂ ಬೇಗ ಹೊಂದಿಕೊಳ್ಳುತ್ತಿದ್ದೇವೆ. ಅಧುನೀಕತೆಯ ಹೊಡೆತಕ್ಕೆ ಸಿಲುಕಿ ತತ್ತರಿಸಿರುವ ಗ್ರಾಮಿಣ ಪರಿಸರವನ್ನು ಅಕ್ಷರ ಸಂಸ್ಕøತಿ ಒಂದೂಗೂಡಿಸಲಿದೆ. ಡಿಜಿಟಲ್ ಗ್ರಂಥಾಲಯಗಳಲ್ಲಿ ಮಕ್ಕಳನ್ನು ತೊಡಗಿಸಿ ಉತ್ತಮ ಮಾರ್ಗದತ್ತ ಕೊಂಡೊಯ್ಯಲು ಎಲ್ಲರು ಮನಸ್ಸು ಮಾಡಬೇಕು ಎಂದರು. 
     ಆರಂಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ. ಗಾಯತ್ರಿ ಅವರು ಸರ್ಕಾರದ ಆದೇಶದನ್ವಯ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಗ್ರಂಥಾಲಯಗಳ ಬಳಕೆ ಹೆಚ್ಚಿಸುವ ಸಲುವಾಗಿ ಗ್ರಂಥಾಲಯಗಳ ಡಿಜಿಟಲೀಕರಣ ಪ್ರಕ್ರಿಯೆ ಆರಂಭವಾಗಿದೆ. ಗ್ರಾಮ ಪಂಚಾಯಿತಿಗಳಲ್ಲಿ ಮೂಲ ಸೌಲಭ್ಯಗಳು ಹಾಗು ಅಭಿವೃದ್ಧಿ ಚಟುವಟಿಕೆಗಳ ಕುರಿತು ಚರ್ಚೆ, ಸಂವಾದ ನಡೆಸಿದ ಸಂದರ್ಭದಲ್ಲಿ ಗ್ರಂಥಾಲಯಗಳ ಅಭಿವೃದ್ಧಿ ವಿಷಯವು ಸಹ ಮಹತ್ವ ಪಡೆದಿತ್ತು. ಇದನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಜಿಲ್ಲಾ ಪಂಚಾಯತ್‍ನಲ್ಲಿ ಶೇ. 10ರಷ್ಟು ಅನುದಾನವನ್ನು ಗ್ರಂಥಾಲಯಗಳ ಅಭಿವೃದ್ಧಿಗೆ ಮೀಸಲಿಡಲಾಗಿದೆ ಎಂದರು. 
      ಜಿಲ್ಲೆಯ ಒಟ್ಟು 130 ಗ್ರಾಮ ಪಂಚಾಯಿತಿಗಳಲ್ಲಿ 120 ಗ್ರಾ.ಪಂ. ಗಳಲ್ಲಿ ಗ್ರಂಥಾಲಯಗಳನ್ನು ಈಗಾಗಲೇ ತೆರೆಯಲಾಗಿದೆ. ಡಿಜಿಟಲ್ ಗ್ರಂಥಾಲಯದಲ್ಲಿ 2 ಕಂಪ್ಯೂಟರ್, ಅಂತರ್ಜಾಲ ವ್ಯವಸ್ಥೆ, ಟಿ.ವಿ ಹಾಗೂ ಅಂಡ್ರಾಯ್ಡ್ ಪೋನ್ ವ್ಯವಸ್ಥೆ ಇರಲಿದೆ. ಈ ಹಿಂದೆ ಗ್ರಂಥಾಲಯಗಳಿಗೆ 26 ಸಾವಿರ ಸದಸ್ಯರು ನೊಂದಣಿಯಾಗಿದ್ದರು. ಪ್ರಸ್ತುತ ಗ್ರಾಮ ಪಂಚಾಯತ್ ಅಧಿಕಾರಿಗಳು ಪ್ರತಿ ಮನೆಮನೆಗೂ ಭೇಟಿ ನೀಡಿ ಅರಿವು ಮೂಡಿಸುತ್ತಿದ್ದು, ಕಳೆದ ವಾರದಿಂದೀಚೆಗೆ 55 ಸಾವಿರ ಸದಸ್ಯತ್ವ ನೀಡಲಾಗಿದೆ. ಸದಸ್ಯತ್ವ ಉಚಿತವಾಗಿದೆ. ಗ್ರಂಥಾಲಯ ನಿರ್ವಹಣೆ ಬಗ್ಗೆ ತರಬೇತಿ ನೀಡಲಾಗಿದೆ. ಮುಂದಿನ ದಿನಗಳಲ್ಲಿ ವಿಕಲಚೇತನರಿಗೂ ಸಹ ಬ್ರೈಲ್‍ಲಿಪಿ ಗ್ರಂಥಾಲಯಗಳ ವ್ಯವಸ್ಥೆ ಮಾಡಲಾಗುವುದು ಎಂದು ಸಿ.ಇ.ಒ ಗಾಯತ್ರಿ ಅವರು ತಿಳಿಸಿದರು.             ಕಾರ್ಯಕ್ರಮದಲ್ಲಿ ಅಜೀಂ ಪ್ರೇಮಜೀ ಪೌಂಢೇಷನ್ ಸಂಸ್ಥೆಯ ವತಿಯಿಂದ ಕೊಡುಗೆಯಾಗಿ ನೀಡಿರುವ ಪುಸ್ತಕಗಳನ್ನು ವಿವಿಧ ಪಂಚಾಯಿತಿ ಅಭಿವೃಧ್ಧಿ ಅಧಿಕಾರಿಗಳಿಗೆ ವಿತರಿಸಲಾಯಿತು. ಇದೇ ವೇಳೆ ಗಾಮ ಪಂಚಾಯತ್‍ಗಳಲ್ಲಿ ಡಿಜಿಟಲ್ ಗ್ರಂಥಾಲಯಗಳ ಅಗತ್ಯತೆ ಬಗ್ಗೆ ಪಂಚಾಯಿತಿ ಅಧಿಕಾರಿಗಳು ಅನಿಸಿಕೆಗಳನ್ನು ಹಂಚಿಕೊಂಡರು. 
      ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಪ್ರಭುಸ್ವಾಮಿ, ಅಜೀಂ ಪ್ರೇಮಜೀ ಪೌಂಢೇಷನ್ ಸಂಸ್ಥೆಯ ರವೀಂದ್ರ, ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments