Friday, March 29, 2024
spot_img
HomeChikballapurಕೋವಿಡ್ 19 ರ ಲಸಿಕೆಯ ಮುನ್ನೆಚ್ಚರಿಕೆ ಡೋಸ್ ಲಸಿಕಾಕರಣ ಅಭಿಯಾನಕ್ಕೆ ಜಿಲ್ಲಾಧಿಕಾರಿ ಆರ್.ಲತಾ ಚಾಲನೆ

ಕೋವಿಡ್ 19 ರ ಲಸಿಕೆಯ ಮುನ್ನೆಚ್ಚರಿಕೆ ಡೋಸ್ ಲಸಿಕಾಕರಣ ಅಭಿಯಾನಕ್ಕೆ ಜಿಲ್ಲಾಧಿಕಾರಿ ಆರ್.ಲತಾ ಚಾಲನೆ

ಚಿಕ್ಕಬಳ್ಳಾಪುರ: ಆರೋಗ್ಯ ಮತ್ತು ಮುಂಚೂಣಿ ಕಾರ್ಯಕರ್ತರು ಸೇರಿದಂತೆ ಅಸ್ವಸ್ಥತೆ ಹೊಂದಿರುವ 60 ವರ್ಷ ಮೇಲ್ಪಟ್ಟವರಿಗೆ ಕೋವಿಡ್ 19 ರ ಲಸಿಕೆಯ ಮುನ್ನೆಚ್ಚರಿಕೆ ಡೋಸ್ ನೀಡುವ ಅಭಿಯಾನಕ್ಕೆ ಸರ್ಕಾರದ ಆದೇಶದಂತೆ ನಗರದ ಜಿಲ್ಲಾಸ್ಪತ್ರೆಯಲ್ಲಿ ಸೋಮವಾರ ಅಂಗನವಾಡಿ ಕಾರ್ಯಕರ್ತೆಯರಿಗೆ “ಮುನ್ನೆಚ್ಚರಿಕಾ ಕೋವಿಡ್ ಲಸಿಕೆ” ಹಾಕಿಸುವ ಮೂಲಕ ಜಿಲ್ಲಾಧಿಕಾರಿ ಆರ್.ಲತಾ ಅವರು ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮುಂಚೂಣಿ ಕಾರ್ಯಕರ್ತರು ಹಾಗೂ 60 ವರ್ಷ ಮೇಲ್ಪಟ್ಟ ಅಸ್ವಸ್ಥತೆ ಹೊಂದಿರುವವರಿಗೂ ಸಹ ವೈದ್ಯರ ಸಲಹೆ ಮೇರೆಗೆ ಕೋವಿಡ್ 19 ರ ಮುನ್ನೆಚ್ಚರಿಕೆ ಡೋಸ್ ಲಸಿಕೆ ನೀಡುವ ಅಭಿಯಾನ ಇಂದಿನಿಂದ ರಾಜ್ಯಾದ್ಯಂತ ಆರಂಭವಾಗಿದ್ದು ಜಿಲ್ಲೆಯಲ್ಲಿಯೂ ಸಹ ಯಶಸ್ವಿಯಾಗಿ ನಡೆಯುತ್ತಿದೆ ಎಂದರು.

2ನೇ ಡೋಸ್ ಪಡೆದ 9 ತಿಂಗಳ ನಂತರ ಕೋವಿಡ್ 19 ರ ಲಸಿಕೆಯ ಮುನ್ನೆಚ್ಚರಿಕೆ ಡೋಸ್ ನೀಡಲಾಗುತ್ತದೆ. ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಪ್ರಸ್ತುತ 8,550 ಜನ ಮುನ್ನೆಚ್ಚರಿಕೆ ಡೋಸ್ ಪಡೆಯಲು ಅರ್ಹರಿದ್ದು, ಜಿಲ್ಲೆಯ ಎಲ್ಲಾ ತಾಲ್ಲೂಕು ಪಿ.ಎಚ್.ಸಿ., ಜಿಲ್ಲಾ ಹಾಗೂ ತಾಲ್ಲೂಕು ಸರ್ಕಾರಿ ಆಸ್ಪತ್ರೆಗಳಲ್ಲಿ ಲಸಿಕೆ ಪಡೆಯಲು ವ್ಯವಸ್ಥೆ ಮಾಡಲಾಗಿದೆ. ಇವರೆಲ್ಲರೂ ಸಹ ಲಸಿಕಾ ಕೇಂದ್ರಗಳಿಗೆ ಸ್ವಯಂಪ್ರೇರಿತರಾಗಿ ಆಗಮಿಸಿ ಕೋವಿಡ್ ಲಸಿಕೆಯನ್ನು ಹಾಕಿಸಿಕೊಳ್ಳುವಂತೆ ಮನವಿ ಮಾಡಿದರು.

ಜ.11 ರಂದು ಲಸಿಕಾ ಮೇಳ

ಜಿಲ್ಲೆಯಲ್ಲಿ ಕೋವಿಡ್ 19 ರ ಲಸಿಕೆಯ ಮೊದಲ ಡೋಸ್ ಶೇ. 100 ರಷ್ಟು ಮುಗಿಸಿದ್ದು, 2 ನೇ ಡೋಸ್ ಲಸಿಕೆ ಪಡೆಯಲು ಅರ್ಹರಿರುವ 85 ಸಾವಿರ ಜನರಿಗೆ ಕೋವಿಡ್ ಲಸಿಕೆ ನೀಡಲು ಜನವರಿ 11 ರಂದು ಜಿಲ್ಲೆಯ ನಗರ ಪ್ರದೇಶ ಸೇರಿದಂತೆ 157 ಗ್ರಾಮ ಪಂಚಾಯ್ತಿಗಳ ವ್ಯಾಪ್ತಿಯಲ್ಲಿ ಲಸಿಕಾ ಮೇಳ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಲಸಿಕೆ ಪಡೆಯಲು ಬಾಕಿ ಇರುವ ಅಷ್ಟೂ ಜನರಿಗೆ ಇಂದು ಮತ್ತು ನಾಳೆ ಅವರೆಲ್ಲರೂ ಲಸಿಕಾಕರಣ ಮಾಡಲು ಜಿಲ್ಲೆಯಾದ್ಯಂತ ಸಕಲ ಸಿದ್ಧತೆಯನ್ನು ಮಾಡಿಕೊಳ್ಳಲಾಗಿದೆ. ಲಸಿಕೆ ಪಡೆಯಲು ಅರ್ಹರಿರುವ ಸಾರ್ವಜನಿಕರೆಲ್ಲರೂ ಸ್ವಯಂಪ್ರೇರಿತರಾಗಿ ಲಸಿಕಾ ಕೇಂದ್ರಗಳಿಗೆ ಆಗಮಿಸಿ ಲಸಿಕೆ ಪಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ಮನವಿ ಮಾಡಿದರು.

ಜಿಲ್ಲೆಯಲ್ಲಿಯು ಸೋಂಕು ಕೊಂಚ ಏರುಗತಿ

ಜಿಲ್ಲೆಯಲ್ಲಿ ಕಳೆದ ವಾರದಿಂದ ದಿನದಿಂದ ದಿನಕ್ಕೆ ಕೊರೊನಾ ಪ್ರಕರಣಗಳು ದ್ವಿಗುಣವಾಗುತ್ತಿವೆ. ಒಟ್ಟಾರೆ ಪ್ರಸ್ತುತ ಜಿಲ್ಲೆಯಲ್ಲಿ 137 ಕೊರೊನಾ ಪ್ರಕರಣಗಳು ಸಕ್ರಿಯವಾಗಿವೆ. ಕೋವಿಡ್ ಸೋಂಕು ವ್ಯಾಪಕವಾಗಿ ಪಸರಿಸುತ್ತಿರುವುದರಿಂದ ಪ್ರತಿಯೊಬ್ಬರು ಕೋವಿಡ್ 19 ರ ಲಸಿಕೆ ಹಾಕಿಸಿಕೊಳ್ಳಬೇಕು. ಜೊತೆಗೆ ಸರ್ಕಾರ ಹೊರಡಿಸಿರುವ ಕೋವಿಡ್ ನಿಯಂತ್ರಣ ಮಾರ್ಗಸೂಚಿ ಕ್ರಮಗಳನ್ನು ಪಾಲಿಸಬೇಕು ಆ ಮೂಲಕ ಸೋಂಕನ್ನು ಹೆಚ್ಚಿನ ಹತೋಟಿಗೆ ತರಬೇಕು ಎಂದು ತಿಳಿಸಿದರು.

ಆರ್.ಟಿ.ಪಿ.ಸಿ.ಆರ್ ಟೆಸ್ಟ್ ಕಡ್ಡಾಯ

ಜಿಲ್ಲೆಯು ಬೆಂಗಳೂರಿಗೆ ಅತೀ ಸಮೀಪದ ಜಿಲ್ಲೆಯಾಗಿದ್ದು, ಉದ್ಯೋಗ ಮತ್ತು ಇನ್ನಿತರ ಕಾರ್ಯಗಳಿಗೆ ದಿನನಿತ್ಯ ಹೋಗಿಬರುವ ಹಾಗೂ ಹೊರ ಜಿಲ್ಲೆಗಳಿಂದ ಬರುವಂತಹವರಿಂದ ಸೋಂಕು ಜಿಲ್ಲೆಯಲ್ಲಿ ಹರಡದಂತೆ ಹೆಚ್ಚಿನ ನಿಗಾವಹಿಸಿದ್ದೇವೆ. ಅಂತಹವರನ್ನು ಆಗಿಂದಾಗ್ಗೆ ಕೋವಿಡ್ ಪರೀಕ್ಷೆಗೆ ನಿಯಮಿತವಾಗಿ ಒಳಪಡಿಸಲಾಗುತ್ತಿದೆ. ಒಂದು ವೇಳೆ ಕೊರೊನಾ ಸೊಂಕು ಲಕ್ಷಣಗಳು ಕಂಡು ಬಂದಲ್ಲಿ ತಕ್ಷಣವೇ ಅವರಿಗೆ ಆರ್.ಟಿ.ಪಿ.ಸಿ.ಆರ್ ಪರೀಕ್ಷೆಗೆ ಒಳಪಡಿಸಿ ಸೂಕ್ತ ಚಿಕಿತ್ಸೆ ಒದಗಿಸಲಾಗುತ್ತಿದೆ. ಆರ್.ಟಿ.ಪಿ.ಸಿ.ಆರ್ ಪರೀಕ್ಷೆಗಳನ್ನು ಹೆಚ್ಚಿಸಲಾಗಿದ್ದು, ಈಗಾಗಲೇ ಪ್ರತಿದಿನ 3,000 ಕ್ಕೂ ಹೆಚ್ಚು ಕೋವಿಡ್ ಪರೀಕ್ಷೆಗಳನ್ನು ಮಾಡಲಾಗುತ್ತಿದೆ. ಜೊತೆಗೆ ನಗರ ಪ್ರದೇಶ ಸೇರಿದಂತೆ ಪ್ರತಿ ವಾರ್ಡ್/ಗ್ರಾಮದಲ್ಲಿಯೂ ಸಹ ಕೋವಿಡ್ ನಿಯಂತ್ರಣ ಟಾಸ್ಕ್ ಪೋರ್ಸ್ ಸಮಿತಿಗಳು ತಮ್ಮ ಕಾರ್ಯಚಟುವಟಿಕೆಗಳನ್ನು ಮತ್ತಷ್ಟು ಚುರುಕುಗೊಳಿಸುವಂತೆ ಸೂಚಿಸಲಾಗಿದೆ ಅದರಂತೆ ಸಮಿತಿಯ ಸದಸ್ಯರು ಕಾರ್ಯೋನ್ಮುಖರಾಗಿದ್ದಾರೆ ಎಂದು ತಿಳಿಸಿದರು.

700 ಆಮ್ಲಜನಕ ಸಹಿತ ಹಾಸಿಗೆಗಳು ಸಿದ್ಧ

ಜಿಲ್ಲೆಯ ಕೋವಿಡ್ ಸರ್ಕಾರಿ ಆಸ್ಪತ್ರೆಗಳಲ್ಲಿ ಕೋವಿಡ್ ರೋಗಿಗಳ ಆರೈಕೆಗಾಗಿ ಹಾಸಿಗೆಗಳನ್ನು ಮೀಸಲಿಡಲಾಗಿದೆ. ಪ್ರತಿ ತಾಲ್ಲೂಕಿನಲ್ಲಿಯೂ ಸಹ ಆಮ್ಲಜನಕಯುಕ್ತ ಹಾಸಿಗೆಗಳಿವೆ. ಕೋವಿಡ್ ರೋಗಿಗಳ ಆರೈಕೆಗಾಗಿ ಒಟ್ಟಾರೆ ಲಭ್ಯವಿರುವ 1,031 ಹಾಸಿಗೆಗಳ ಪೈಕಿ 700 ಹಾಸಿಗೆಗಳು ಆಮ್ಲಜನಕ ಯುಕ್ತ ಹಾಸಿಗೆಗಳಾಗಿವೆ. ಜೊತೆಗೆ ಕೋವಿಡ್ ರೋಗಿಗಳ ವೈದ್ಯಕೀಯ ಚಿಕಿತ್ಸೆಗಾಗಿ ಅತೀ ಮುಖ್ಯವಾಗಿ ಬೇಕಾಗಿರುವ ಆಮ್ಲಜನಕ ಪೂರೈಕೆಗೆ ಜಿಲ್ಲಾಡಳಿತ ಮುಂಜಾಗ್ರತ ಕ್ರಮಕೈಗೊಂಡು ಜಿಲ್ಲಾ ಕೇಂದ್ರದಲ್ಲಿ ಎರಡು ಮತ್ತು ಪ್ರತಿ ತಾಲ್ಲೂಕು ಕೇಂದ್ರಗಳಲ್ಲಿ ಒಂದರಂತೆ ಒಟ್ಟು 7 ಆಮ್ಲಜನಕ ಉತ್ಪಾದಕಾ ಘಟಕಗಳನ್ನು ಈಗಾಗಲೇ ಸ್ಥಾಪಿಸಲಾಗಿದೆ ಈ ಮೂಲಕ ವೈದ್ಯಕೀಯ ಆರೈಕೆಗಾಗಿ ಬೇಕಿರುವ ಆಮ್ಲಜನಕವನ್ನು ಸ್ವಯಂ ಉತ್ಪಾದಿಸಿಕೊಳ್ಳಲು ಜಿಲ್ಲಾಡಳಿತ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದೆ ಎಂದರು.

ಪ್ರಸ್ತುತ ಕೋವಿಡ್ ಸಕ್ರಿಯವಾಗಿರುವ 137 ಸೋಂಕಿತರಲ್ಲಿ ಯಾರೋಬ್ಬರಿಗೂ ಗಂಭೀರ ರೋಗ ಲಕ್ಷಗಳು ಕಂಡುಬಂದಿಲ್ಲ. ಬಹುತೇಕರು ರೋಗ ಲಕ್ಷಣ ರಹಿತ ಸೋಂಕಿತರೇ ಆಗಿದ್ದಾರೆ. ಆಕ್ಸಿಜನ್ ಅವಲಂಭಿತ ರೋಗಿಗಳು ಜಿಲ್ಲೆಯಲ್ಲಿ ಯಾರೂ ಇಲ್ಲದೇ ಇರುವುದು ಆಶಾದಾಯಕವಾದ ವಿಚಾರ. ಆದರೆ ಕೊರೊನಾ ಸೋಂಕು ಏರುಗತಿಯಲ್ಲಿ ಹರಡುತ್ತಿರುವುದು ಕಂಡು ಬರುತ್ತಿದ್ದು, ಈ ಪ್ರಸರಣವನ್ನು ತಡೆಯುವ ನಿಟ್ಟಿನಲ್ಲಿ ಜಿಲ್ಲಾಡಳಿತ ಎಲ್ಲಾ ಮುಂಜಾಗ್ರತ ಕ್ರಮಗಳನ್ನು ಕೈಗೊಂಡಿದೆ ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಯಾದ ಇಂದಿರಾ ಆರ್.ಕಬಾಡೆ, ಜಿಲ್ಲಾಸ್ಪತ್ರೆಯ ವೈದ್ಯರು, ಆರೋಗ್ಯ ಮತ್ತು ಮುಂಚೂಣಿ ಕಾರ್ಯಕರ್ತರು ಹಾಗೂ ಸಿಬ್ಬಂದಿ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments