Friday, March 29, 2024
spot_img
HomeChamarajanagarಮಹನೀಯರ ಆದರ್ಶ ಮಾನವೀಯ ಗುಣಗಳನ್ನು ಎಲ್ಲರೂ ಅಳವಡಿಸಿಕೊಳ್ಳಬೇಕು : ಎಂ. ರಾಮಚಂದ್ರ

ಮಹನೀಯರ ಆದರ್ಶ ಮಾನವೀಯ ಗುಣಗಳನ್ನು ಎಲ್ಲರೂ ಅಳವಡಿಸಿಕೊಳ್ಳಬೇಕು : ಎಂ. ರಾಮಚಂದ್ರ

ಚಾಮರಾಜನಗರ: ಮಹನೀಯರು ಜೀವನದುದ್ದಕ್ಕೂ ಎಲ್ಲಾ ಸಮಾಜಗಳ ಒಳಿತಿಗೆ ಶ್ರಮಿಸಿರುವುದರಿಂದ ಅವರ ಆದರ್ಶ ಮಾನವೀಯ ಗುಣಗಳನ್ನು ನಾವೆಲ್ಲರೂ ಅಳವಡಿಸಿಕೊಳ್ಳುವುದು ಅವಶ್ಯವಾಗಿದೆ ಎಂದು ಕೇಂದ್ರ ಪರಿಹಾರ ಸಮಿತಿಯ ಅಧ್ಯಕ್ಷರಾದ ಎಂ. ರಾಮಚಂದ್ರ ಅವರು ಅಭಿಪ್ರಾಯಪಟ್ಟರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಿನ್ನೆ (ಭಾನುವಾರ) ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಸಂತ ಸೇವಾಲಾಲ್, ಸಂತಕವಿ ಸರ್ವಜ್ಞ ಹಾಗೂ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಮೊಗಲರ ವಿರುದ್ಧ ಶೌರ್ಯ, ಸಾಹಸದಿಂದ ಹೋರಾಡಿ ಸ್ವಾತಂತ್ರದ ಕಿಚ್ಚನ್ನು ದೇಶಾದ್ಯಂತ ಪಸರಿಸಿದರಲ್ಲಿ ಶಿವಾಜಿ ಮಹಾರಾಜರು ಪ್ರಮುಖರು. ಸಂತ ಸೇವಾಲಾಲರು ಸಮಾಜದಲ್ಲಿ ಹಾಸುಹೊಕ್ಕಾಗಿದ್ದ ಮೂಢನಂಬಿಕೆ, ಡಾಂಬಿಕತೆ ಹೋಗಲಾಡಿಸಿ ಎಲ್ಲಾ ಸಮುದಾಯಗಳನ್ನು ಒಗ್ಗೂಡಿಸುವಲ್ಲಿ ಅವಿರಥ ಪ್ರಯತ್ನ ಮಾಡಿದರು. ಸಂತಕವಿ ಸರ್ವಜ್ಞರು ಸಮಾಜವನ್ನು ಎಚ್ಚರಿಸುವಂತಹ ವಚನಗಳನ್ನು ರಚಿಸಿದರು. ಅವರು ರಚಿಸಿದ ತ್ರಿಪದಿಗಳ ಸಾರ ಇಂದಿಗೂ ಪ್ರಸ್ತುತವಾಗಿವೆ. ಇಂತಹ ಮಹಾನ್ ವ್ಯಕ್ತಿಗಳ ಆದರ್ಶ ಗುಣಗಳನ್ನು ಪ್ರತಿಯೊಬ್ಬರು ಅನುಸರಿಸಬೇಕು ಎಂದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ನಗರಸಭೆ ಅಧ್ಯಕ್ಷರಾದ ಸಿ.ಎಂ. ಆಶಾ ಅವರು ಅಪ್ರತಿಮ ದೇಶಪ್ರೇಮಿಯಾಗಿದ್ದ ಶಿವಾಜಿಯವರು ಸ್ವಾಭಿಮಾನಿ ರಾಷ್ಟç ಕಟ್ಟಲು ಪಣತೊಟ್ಟಿದ್ದರು. ತಾಯಿಯಿಂದ ಮೌಲ್ಯಯುತ ಶಿಕ್ಷಣ ಪಡೆದಿದ್ದ ಶಿವಾಜಿ ಚಿಕ್ಕವಯಸ್ಸಿನಲ್ಲಿಯೇ ಎಲ್ಲಾ ಬಗೆಯ ಯುದ್ಧಕಲೆಗಳನ್ನು ಕರಗತ ಮಾಡಿಕೊಂಡಿದ್ದರು. ಸರ್ವಜ್ಞರ ವಚನಗಳು ಎಲ್ಲರಿಗೂ ದಾರಿದೀಪವಾಗಿವೆ. ಸೇವಾಲಾಲರು ಜನರಿಗೆ ಸತ್ಯದ ಹಾದಿ ತೋರಿ ಸಮುದಾಯವನ್ನು ಸರಿಯಾದ ದಿಕ್ಕಿನೆಡೆ ನಡೆಸಿದರು. ಇವರುಗಳ ಸ್ಮರಣೆ ಅಗತ್ಯವಾಗಿದೆ ಎಂದು ತಿಳಿಸಿದರು.

ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾದ ಶಾಂತಮೂರ್ತಿ ಕುಲಗಾಣ ಅವರು ಮಾತನಾಡಿ ಇಂದು ನಾವು ಸ್ವಾರ್ಥಕ್ಕಾಗಿ ಬದುಕುತ್ತಿದ್ದೇವೆ. ಶಿವಾಜಿ ಮಹಾರಾಜರು, ಸಂತ ಸೇವಾಲಾಲರು, ಕವಿ ಸರ್ವಜ್ಞರು ಸೇರಿದಂತೆ ದೇಶದಲ್ಲಿ ಬಂದು ಹೋಗಿರುವ ಎಲ್ಲಾ ಮಹಾಪುರುಷರು ಇಡೀ ಸಮಾಜ, ಸಮುದಾಯಗಳ ಶ್ರೇಯೋಭಿವೃದ್ದಿಗೆ ನಿರಂತರವಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದರು. ಯಾವುದೇ ಜಯಂತಿ ಕಾರ್ಯಕ್ರಮಗಳಲ್ಲಿ ಎಲ್ಲಾ ಸಮುದಾಯಗಳು ಭಾಗವಹಿಸಿದಾಗ  ಮಾತ್ರ ಸಮಾನತೆ ಎಲ್ಲೆಡೆ ಕಾಣಲು ಸಾಧ್ಯವಾಗಲಿದೆ. ಮಹನೀಯರಿಗೆ ಅದೇ ನಾವು ತೋರುವ ಗೌರವ ಎಂದರು.

ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಗುಡೂರು ಭೀಮಸೇನ ಅವರು ಮಾತನಾಡಿ ಎಲ್ಲಾ ಸಮಾಜ, ಸಮುದಾಯಗಳು ತಮ್ಮ ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ಶಿಕ್ಷಣ ನೀಡಿ ಸಾಕ್ಷರರನ್ನಾಗಿಸಬೇಕು. ಮಹಾನ್ ವ್ಯಕ್ತಿಗಳ ಆಶಯಗಳು ಇದೇ ಆಗಿದೆ. ಮಹನೀಯರ ಸಂದೇಶಗಳನ್ನು ಮನೆಮನೆಗೆ ತಲುಪಿಸಬೇಕು ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹೆಚ್ಚುವರಿ ಜಿಲ್ಲಾಧಿಕಾರಿ ಎಸ್.ಕಾತ್ಯಾಯಿನಿದೇವಿ ಅವರು ಮಾತನಾಡಿ ದೇಶದಲ್ಲಿ ಸಾಕಷ್ಟು ಮಹಾನ್ ಸಂತರು ಸಮಾಜವನ್ನು ತಿದ್ದುವ ಕೆಲಸದಲ್ಲಿ ನಿರತರಾಗಿದ್ದರು. ಮುಂದಿನ ದಿನಗಳಲ್ಲಿ ಅವರ ಜೀವನ ಸಾಧನೆಗಳ ಕುರಿತು ಶಾಲಾ ಮಟ್ಟದಲ್ಲಿ ಚರ್ಚಾ ಸ್ಪರ್ಧೆ ಪ್ರಬಂಧ ಸ್ಪರ್ಧೆಗಳನ್ನು ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಏರ್ಪಡಿಸಿ  ವಿಜೇತರಿಗೆ ಬಹುಮಾನ ನೀಡಲಾಗುವುದು ಎಂದರು.

ನಗರಸಭೆ ಸದಸ್ಯರಾದ ಚಂದ್ರಶೇಖರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಅನಿತಾ, ಜಿಲ್ಲಾಸ್ಪತ್ರೆಯ ನೋಡಲ್ ಅಧಿಕಾರಿ ಡಾ. ಮಹೇಶ್, ಪಟ್ಟಣ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ತಿಮ್ಮರಾಜು, ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯರಾದ ಸಿ.ಎಂ. ನರಸಿಂಹಮೂರ್ತಿ, ವಿವಿಧ ಸಮಾಜಗಳ ಮುಖಂಡರಾದ, ಮದ್ದೂರು ವಿರೂಪಾಕ್ಷಪ್ಪ, ರಾಜೇಂದ್ರ, ಶಿವಣ್ಣ, ಚಾಮರಾಜು, ವೆಂಕಟರಾವ್ ಸಾಠೆ, ಶ್ರೀನಿವಾಸ ರಾವ್ ಸಾಠೆ, ಮಾದಪ್ಪ ನಾಯಕ, ಶಾಂತರಾಜು, ಪಳನಿಸ್ವಾಮಿ ಜಾಗೇರಿ, ಸೋಮಶೇಖರ್, ಗು. ಪುರುಷೋತ್ತಮ್, ದುಗ್ಗಹಟ್ಟಿ ಮಲ್ಲಿಕಾರ್ಜುನಸ್ವಾಮಿ, ಡಿಎಸ್.ಎಸ್. ನಾಗರಾಜು, ಇತರರು ಇದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments