Friday, April 19, 2024
spot_img
HomeChikballapurನಂದಿಧಾಮ ಪ್ರವಾಸಿಗರಿಗಾಗಿ ಸ್ಥಳೀಯ ಕಲೆಗಳ ಪ್ರದರ್ಶನ: ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್

ನಂದಿಧಾಮ ಪ್ರವಾಸಿಗರಿಗಾಗಿ ಸ್ಥಳೀಯ ಕಲೆಗಳ ಪ್ರದರ್ಶನ: ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್

ಚಿಕ್ಕಬಳ್ಳಾಪುರ: ನಂದಿಗಿರಿಧಾಮವು ವಿಶ್ವ  ವಿಖ್ಯಾತ  ಪ್ರವಾಸಿ ತಾಣವಾಗಿದ್ದು, ಪ್ರವಾಸಿಗರ ಹಿತ ದೃಷ್ಟಿಯಿಂದ ಅಭಿವೃದ್ಧಿ ಪಥದಲ್ಲಿ ಇದನ್ನು ಮತ್ತಷ್ಟು ಮೆಲ್ದರ್ಜೆಗೇರಿಸಲು ರೋಪ್ ವೇ ಹಾಗೂ ರಾಜಸ್ಥಾನದಲ್ಲಿರುವಂತಹ ಕಲಾಧಾಮ ರೀತಿ ಚಿಕ್ಕಬಳ್ಳಾಪುರ ಸ್ಥಳೀಯ ಕಲೆಗಳನ್ನು ಪ್ರದರ್ಶಿಸುವಂತಹ ಕಾರ್ಯಚಟುವಟಿಕೆಗಳನ್ನು ಅನುಷ್ಠಾನಗೊಳಿಸಲಾಗುತ್ತದೆ ಎಂದು ಪ್ರವಾಸೋದ್ಯಮ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವರಾದ ಆನಂದ ಸಿಂಗ್ ಅವರು ತಿಳಿಸಿದರು.

ಬುಧವಾರ ಬೆಳಿಗ್ಗೆ ನಂದಿಗಿರಿಧಾಮಕ್ಕೆ ಭೇಟಿ ನೀಡಿದ ಅವರು, ಯೋಗನಂದೀಶ್ವರ ದೇವರ ದರ್ಶನ ಪಡೆದುಕೊಂಡು ನಂತರ ಟಿಪ್ಪು ಡ್ರಾಪ್, ಹಿಲ್ ವ್ಯೂ, ಸ್ಥಳಗಳಿಗೆ ಭೇಟಿ ನೀಡಿ ಪ್ರಗತಿ ಪರಿಶೀಲನೆ ನಡೆಸಿದರು. ನಂತರ ಸ್ವತಃ ಸಚಿವರು ಇಲ್ಲಿನ ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ, ವಿವಿಧ ಮಳಿಗೆಗಳ ವಹಿವಾಟನ್ನು, ವಾಹನ ನಿಲುಗಡೆ ವ್ಯವಸ್ಥೆ ಬಗ್ಗೆ ಒಬ್ಬ ಪ್ರವಾಸಿಗನಿಗಾಗಿ ಪರಿಶೀಲಿಸಿ ನಂದಿ ಗಿರಿಧಾಮದ ಸ್ವಚ್ಛತೆ  ಮತ್ತು  ಮೂಲಭೂತ  ಸೌಲಭ್ಯಗಳ  ಅಭಿವೃದ್ಧಿಗೆ  ಒತ್ತು ನೀಡಲು   ಅಗತ್ಯ ಸಲಹೆ ಸೂಚನೆಗಳನ್ನು ಸ್ಥಳದಲ್ಲೇ ಇದ್ದ ಅಧಿಕಾರಿಗಳಿಗೆ ನೀಡಿದರು.

ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಂದಿಬೆಟ್ಟದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯ ಚಟುವಟಿಕೆಗಳನ್ನು ಕೈಗೆತ್ತಿಗೊಂಡಿದ್ದು, ಅದನ್ನು ಮತ್ತಷ್ಟು ಚುರುಕುಗೊಳಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ನಂದಿಬೆಟ್ಟದಲ್ಲಿ ಕೆಲವು ಸ್ಥಳಗಳನ್ನು ಗುರುತಿಸಿದ್ದು, ಅಲ್ಲಿ ಸ್ಥಳೀಯ ಕಲೆಯನ್ನು ಪ್ರದರ್ಶಿಸಿ ಪ್ರವಾಸಿಗರನ್ನು ಸೆಳೆಯಲಾಗುವುದು. ಇದರಿಂದ ಸ್ಥಳೀಯ ಕಲಾವಿದರಿಗೆ ಉದ್ಯೋಗ ಸೃಷ್ಟಿಯಾಗುತ್ತದೆ ಎಂದರು.

ವಾಹನಗಳಿಗೆ ಉತ್ತಮ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಿ ಟ್ರಾಫಿಕ್ ಸಮಸ್ಯೆಯನ್ನು ನಿವಾರಿಸಲಾಗುವುದು. ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಜೊತೆಗೆ  ಈ  ತಿಂಗಳ  ಅಂತ್ಯದೊಳಗೆ ರೋಪ್ ವೇ ಯೋಜನೆಗೆ ಟೆಂಡರ್ ಕರೆದು ಅತೀ ಶೀಘ್ರದಲ್ಲಿ  ಇನ್ನಷ್ಟು ಅಭಿವೃದ್ಧಿ ಕಾರ್ಯಗಳನ್ನು ಆರಂಭಿಸಲಾಗುತ್ತದೆ ಎಂದು ಹೇಳಿದರು.

ಪ್ರವಾಸೋದ್ಯಮ ನೂತನ ಯೋಜನೆಗಳು

ನೂತನ ಪ್ರವಾಸೋದ್ಯಮ ನೀತಿಯನ್ನು ಜಾರಿಗೆ ತಂದಿದ್ದು ಅದರಂತೆ ಈಗಾಗಲೇ ಪ್ರವಾಸಿ ಸ್ಥಳಗಳಲ್ಲಿ ನಿರ್ಮಿಸಿಕೊಳ್ಳುವ ಹೋಟೆಲ್ ಗಳಿಗೆ ಕ್ಲಸ್ಟರ್ ಗಳ ಮೂಲಕ ಸಬ್ಸಿಡಿ ನೀಡುವ ನೀತಿಯನ್ನು ಅನುಷ್ಟಾನಗೊಳಿಸಲಾಗಿದೆ. ಹಂಪಿ, ಹಳೆಬೀಡು ಹಾಗೂ ಬಾದಾಮಿ ಸ್ಥಳಗಳಲ್ಲಿ ಹೋಟೆಲ್ ಯೋಜನೆಗಳಿಗೆ ಭೂಮಿಪೂಜೆ ನೆರವೇರಿಸಿ ಕಾರ್ಯರಂಭವನ್ನು  ಸಹ ಮಾಡಲಾಗಿದೆ ಎಂದರು.

ಈ ಸಂದರ್ಭದಲ್ಲಿ ಪ್ರವಾಸೋದ್ಯಮ ಇಲಾಖೆಯ ಕಾರ್ಯದರ್ಶಿಗಳಾದ ಶ್ರೀ ಪಂಕಜ್ ಕುಮಾರ್ ಪಾಂಡೇ, ಕೆ.ಎಸ್.ಟಿ.ಡಿ.ಸಿ ವ್ಯವಸ್ಥಾಪಕ ನಿರ್ದೇಶಕರಾದ ಜಗದೀಶ್, ಅಪರ ಜಿಲ್ಲಾಧಿಕಾರಿ ಎಚ್.ಅಮರೇಶ್, ಉಪವಿಭಾಗಾಧಿಕಾರಿ ಡಾ.ಜಿ.ಸಂತೋಷ್ ಕುಮಾರ್, ತಾಲ್ಲೂಕು ತಹಸೀಲ್ದಾರ್ ಗಣಪತಿಶಾಸ್ತ್ರೀ ಅವರು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments