Friday, April 19, 2024
spot_img
HomeBangaloreಚಿಕ್ಕಬಳ್ಳಾಪುರ ನಗರವನ್ನು ಸುಂದರ ನಗರವನ್ನಾಗಿಸಲು ವಿವಿಧ ಕಾಮಗಾರಿಗೆ ಭೂಮಿಪೂಜೆ: ಸಚಿವ ಡಾ.ಕೆ.ಸುಧಾಕರ್

ಚಿಕ್ಕಬಳ್ಳಾಪುರ ನಗರವನ್ನು ಸುಂದರ ನಗರವನ್ನಾಗಿಸಲು ವಿವಿಧ ಕಾಮಗಾರಿಗೆ ಭೂಮಿಪೂಜೆ: ಸಚಿವ ಡಾ.ಕೆ.ಸುಧಾಕರ್

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ನಗರವು ಅತೀ ವೇಗವಾಗಿ ಅಭಿವೃದ್ಧಿಯಾಗುತ್ತಿದ್ದು, ಅದನ್ನು ಮತ್ತಷ್ಟು ಮೇಲ್ದರ್ಜೆಗೇರಿಸಿ  ಸುಂದರ ಮಾದರಿ ನಗರವನ್ನಾಗಿಸುವ ನಿಟ್ಟಿನಲ್ಲಿ ಗ್ರಾಮೀಣ ಭಾಗದಿಂದ ಚಿಕ್ಕಬಳ್ಳಾಪುರ ನಗರಕ್ಕೆ ಪ್ರವೇಶಿಸುವ ಪ್ರಮುಖ ರಸ್ತೆಗಳನ್ನು ಉತ್ತಮ  ಗುಣಮಟ್ಟದ ಕಾಂಕ್ರಿಂಟ್ ರಸ್ತೆಗಳನ್ನಾಗಿ  ನಿರ್ಮಿಸುವ ಕಾರ್ಯಕ್ಕೆ ಇಂದು (ಗುರುವಾರ) ನಗರದ  ವಿವಿಧೆಡೆ ಭೂಮಿಪೂಜೆ ನೆರವೇರಿಸಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವರಾದ ಡಾ.ಕೆ.ಸುಧಾಕರ್ ಅವರು ತಿಳಿಸಿದರು.

ಗುರುವಾರ ಜಿಲ್ಲೆಯ ಪ್ರವಾಸ ಕೈಗೊಂಡಿದ್ದು ವಿವಿಧ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಚಿಕ್ಕಬಳ್ಳಾಪುರ ನಗರಕ್ಕೆ ನಂದಿ, ಮುಸ್ಟೂರು, ಮೈಲಪ್ಪನಹಳ್ಳಿ ಮತ್ತು ಮಂಚನಬಲೆ ಕಡೆಯಿಂದ ಸಂಪರ್ಕಿಸುವ ರಸ್ತೆಗಳನ್ನು  ಸುಸಜ್ಜಿತವಾಗಿ  ಅಭಿರುದ್ಧಿ ಪಡಿಸಿ ಉತ್ತಮ ಸಿ.ಸಿ.ರಸ್ತೆ ಹಾಗೂ ರಸ್ತೆ  ಇಕ್ಕೆಲಗಳಲ್ಲಿ  ಚರಂಡಿ ವ್ಯವಸ್ಥೆ ಕಲ್ಪಿಸಲು ಅನುದಾನವನ್ನು ಬಿಡುಗಡೆಗೊಳಿಸಲಾಗಿದೆ. ಈ ಅನುದಾನದಲ್ಲಿ ಗ್ರಾಮೀಣ ಭಾಗದಿಂದ ನಗರಕ್ಕೆ ಆಗಮಿಸುವವರಿಗೆ ನಗರ ಎಂಬ ಮನೋಭಾವನೆ ಉಂಟಾಗುವ ರೀತಿ ಮಾದರಿಯಾಗಿ ರಸ್ತೆಗಳನ್ನು ಅಭಿವೃದ್ಧಿ  ಪಡಿಸಲಾಗುವುದು  ಎಂದರು.

ಬೆಂಗಳೂರಿನಿಂದ ಚಿಕ್ಕಬಳ್ಳಾಪುರ ನಗರಕ್ಕೆ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿಯ ಚತುಷ್ಪಥ (four line)ರೀತಿಯ ರಸ್ತೆಯು ಅನೇಕ ನಗರಗಳಿಗೆ ಇಲ್ಲ. ಗ್ರಾಮೀಣ ಭಾಗದಿಂದ ನಗರವನ್ನು ಸಂಪರ್ಕಿಸುವ ರಸ್ತೆಗಳನ್ನು ಸಹ ಗುಣಮಟ್ಟದಲ್ಲಿ ನಿರ್ಮಿಸಲು ಉದ್ದೇಶಿಸಿದ್ದು, ನಗರದ ವಿವಿಧೆಡೆ ರಸ್ತೆ ನಿರ್ಮಾಣಕ್ಕೆ ಇಂದು ಭೂಮಿಪೂಜೆ ನೆರವೇರಿಸಲಾಗಿದೆ ಎಂದು ಹೇಳಿದರು.

ನೂತನ ಮಳಿಗೆಗಳಿಂದ ಆದಾಯ

ನಗರಸಭೆ ವತಿಯಿಂದ ನಗರಸಭಾ ವ್ಯಾಪ್ತಿಯ ಕೃಷ್ಣಾ ಟಾಕೀಸ್ ಮುಂಭಾಗದಲ್ಲಿ ಐ.ಡಿ.ಎಸ್.ಎಮ್.ಟಿ ಯೋಜನೆಯಡಿ  ನೂತನ 13 ಮಳಿಗೆಗಳನ್ನು ನಿರ್ಮಿಸಲಾಗಿದ್ದು ಇದು ಭವ್ಯವಾದ ಸಂಕೀರ್ಣವಾಗಿದೆ. ಅಲ್ಲದೆ ನಗರದ ಹೃದಯ ಭಾಗದಲ್ಲಿರುವುದರಿಂದ ಹೆಚ್ಚು ಬೇಡಿಕೆಯೂ ಇದ್ದು, ವಾರದೊಳಗೆ ಹರಾಜು ಕರೆದು ಬಾಡಿಗೆಗೆ ನೀಡುವ ವ್ಯವಸ್ಥೆಯನ್ನು ಪ್ರಾರಂಭಿಸುವಂತೆ ಅಧಿಕಾರಿಗಳಿಗೆ ಈಗಾಗಲೇ ಸೂಚಿಸಲಾಗಿದೆ. ಇದರಿಂದ ನಗರಸಭೆಯ ವರಮಾನ ಸಹ  ಹೆಚ್ಚಾಗಲಿದ್ದು, ಸಂಪನ್ಮೂಲವನ್ನು ಕ್ರೂಢಿಕರಿಸಲು  ಸಹಕಾರಿಯಾಗಲಿದೆ ಎಂದರು.

ಸಚಿವರಿಂದ ನಗರಸಭೆ ಜನಪ್ರತಿನಿಧಿಗಳು  ಹಾಗೂ  ಅಧಿಕಾರಿಗಳಿಗೆ ಅಭಿನಂದನೆ

ಡಿಜಿಟಲ್ ಬ್ಯಾಂಕಿಂಗ್ ವ್ಯವಸ್ಥೆಯ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಕನಸಿನ ಯೋಜನೆಗೆ ಪೂರಕವಾಗಿ ಬ್ಯಾಂಕ್ ಆಫ್ ಬರೋಡ ಅವರೊಂದಿಗೆ ಒಪ್ಪಂದ ಮಾಡಿಕೊಂಡು ನಗರಸಭೆ ಆವರಣದಲ್ಲಿ ಡಿಜಿಟಲ್ ಬ್ಯಾಂಕಿಂಗ್ ವ್ಯವಸ್ಥೆ ಶಾಖೆಯನ್ನು ತೆರೆದಿರುವುದು ಉತ್ತಮ ಕಾರ್ಯವಾಗಿದೆ. ಡಿಜಿಟಲ್ ಕಾರ್ಡ್ ಮತ್ತು ಸ್ವೈಪಿಂಗ್ ವ್ಯವಸ್ಥೆ ಒದಗಿಸಿದ್ದು, ಹಣ ಪಾವತಿ ಮಾಡಲು ಸಾಲಿನಲ್ಲಿ ನಿಲ್ಲುವ ಹಾಗೂ ಇನ್ನಿತರ ತಾಂತ್ರಿಕ ಸಮಸ್ಯೆಗಳ  ಪರಿಹಾರಕ್ಕೆ  ಉತ್ತಮ ಮಾರ್ಗವಾಗಿದೆ.  ಇದರಿಂದ ನಗರಸಭೆಗೆ ಕೂಡ ಹೆಚ್ಚು ಹಣ ಸಂದಾಯವಾಗುತ್ತದೆ.  ಈ ಕಾರ್ಯಕ್ಕೆ ಸಹಕರಿಸಿದ ನಗರಸಭೆ ಅಧ್ಯಕ್ಷರು, ಸದಸ್ಯರು, ಪೌರಾಯುಕ್ತರು ಮತ್ತು ಅಧಿಕಾರಿಗಳು  ಹಾಗೂ  ಸಿಬ್ಬಂದಿಗೆ  ಅಭಿನಂದನೆ ತಿಳಿಸಿದರು.

400 ಪಶು ವೈದ್ಯರ ನೇರ ನೇಮಕ

ಕ್ಯಾಬಿನೆಟ್ ಇತ್ತೀಚೆಗೆ 400 ಪಶು ವೈದ್ಯರನ್ನು ನೇಮಕ ಮಾಡಲು ಒಪ್ಪಿಗೆ ಸೂಚಿಸಿದೆ. ಅದನ್ನು ಕೆಪಿಎಸ್ಸಿ ಮೂಲಕ ನೇರ ನೇಮಕಾತಿ ಮಾಡಲಾಗುತ್ತದೆ ಎಂದು ತಿಳಿಸಿದರು.

ಜಿಲ್ಲಾಮಟ್ಟದ ಪಾಲಿಕ್ಲಿನಿಕ್ ಆಸ್ಪತ್ರೆ ನಿರ್ಮಾಣ

ಜಿಲ್ಲೆಯಲ್ಲಿ ಸುಸಜ್ಜಿತವಾದ ಜಿಲ್ಲಾಮಟ್ಟದ ಪಾಲಿಕ್ಲಿನಿಕ್ ಆಸ್ಪತ್ರೆಯನ್ನು ನಿರ್ಮಿಸಲು ಮಂಚನಬಲೆ ಗ್ರಾಮಪಂಚಾಯಿತಿ ವ್ಯಾಪ್ತಿಯ ಹೊನ್ನೇನಹಳ್ಳಿ ಗ್ರಾಮದ ಸರ್ವೆ ನಂ 26 ರಲ್ಲಿ 1.20 ಎಕರೆ ಜಮೀನನ್ನು ಜಿಲ್ಲಾಡಳಿತದಿಂದ ಮಂಜೂರು ಮಾಡಲಾಗಿದೆ. ಈ ಆಸ್ಪತ್ರೆ ನಿರ್ಮಾಣಕ್ಕೆ 2 ಕೋಟಿ ಅನುದಾನ ಕಾಮಗಾರಿಗಾಗಿ ಲಭ್ಯವಿದೆ. ಈ  ಅನುದಾನದಲ್ಲಿ ಸುಸಜ್ಜಿತ ಪ್ರಯೋಗಾಲಯ, ಪ್ರಾಣಿಗಳ ತುರ್ತುಚಿಕಿತ್ಸೆಗಾಗಿ ಆಂಬುಲೆನ್ಸ್ ಸೇವೆ ಹಾಗೂ ತಜ್ಞ ಪಶುವೈದ್ಯರಿಂದ ಜಾನುವಾರುಗಳಿಗೆ ಚಿಕಿತ್ಸೆ ನೀಡುವ ವ್ಯವಸ್ಥೆಯನ್ನು ನಿರ್ಮಾಣವಾಗಲಿದೆ ಎಂದು  ತಿಳಿಸಿ  ಈ  ಆಸ್ಪತ್ರೆಯ  ಕಟ್ಟಡ  ನಿರ್ಮಾಣ ಕಾಮಗಾರಿಗೆ ಭೂಮಿ  ಪೂಜೆ  ನೇರವೇರಿಸಿದರು.

ಸಚಿವರ  ಇಂದಿನ  ಕಾರ್ಯಕ್ರಮ  ಏನೇನೂ?

ಮೊದಲಿಗೆ  ಚಿಕ್ಕಬಳ್ಳಾಪುರ ನಗರಸಭೆ ಕಚೇರಿಯ ಆವರಣದಲ್ಲಿ ನಿರ್ಮಿಸಿರುವ ಬ್ಯಾಂಕ್ ಆಫ್ ಬರೋಡದ ನೂತನ ಪಾವತಿ ಕೇಂದ್ರದ ಉದ್ಘಾಟನೆಯನ್ನು ನೆರವೇರಿಸಿದರು. ನಂತರ ನಗರಸಭಾ ವ್ಯಾಪ್ತಿಯ ಕೃಷ್ಣಾ ಟಾಕೀಸ್ ಮುಂಭಾಗದಲ್ಲಿ ಐ.ಡಿ.ಎಸ್.ಎಮ್.ಟಿ ಯೋಜನೆಯಡಿ ನಿರ್ಮಿಸಿರುವ ನೂತನ ಅಂಗಡಿ ಮಳಿಗೆಗಳ ಉದ್ಘಾಟನೆಯನ್ನು ನೆರವೇರಿಸಿದರು.

ಅನಂತರ ನಗರದ ಬುದ್ಧ ವೃತ್ತದಿಂದ ನಗರಸಭೆ ಪರಿಮಿತಿವರೆಗಿನ ಮೈಲಪ್ಪನಹಳ್ಳಿ  ರಸ್ತೆಯಲ್ಲಿ ಸಿ.ಸಿ ರಸ್ತೆ ಮತ್ತು ಚರಂಡಿ ನಿರ್ಮಾಣದ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು.

ಕೆ.ಎಸ್.ಆರ್‌.ಟಿ.ಸಿ ಡಿಪೋ ಹತ್ತಿರದಿಂದ  ನಗರಸಭೆ ಪರಿಮಿತಿವರೆಗಿನ ಮುಸ್ಟೂರು ರಸ್ತೆ ಯಲ್ಲಿ ಸಿ.ಸಿ ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು ಮತ್ತು ನಗರದ ಬಿ.ಬಿ ರಸ್ತೆಯಿಂದ ಬೈಪಾಸ್ ರಸ್ತೆವರೆಗಿನ ಮಂಚನಬಲೆ ರಸ್ತೆಯಲ್ಲಿ ಸಿ.ಸಿ. ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿಯ ಭೂಮಿ ಪೂಜೆಯನ್ನು ನೆರವೇರಿಸಿದರು.ನಂತರ  ನಗರದ ಹೊರವಲಯದಲ್ಲಿ (ಚಿತ್ರಾವತಿ  ಸಮೀಪದಲ್ಲಿ)  ನಿರ್ಮಾಣ ಆಗಲಿರುವ  “ಚಿಕ್ಕಬಳ್ಳಾಪುರ ಜಿಲ್ಲಾ ಪಾಲಿಕ್ಲಿನಿಕ್ ನೂತನ ಕಟ್ಟಡ ಕಾಮಗಾರಿಗೆ ಭೂಮಿಪೂಜೆಯನ್ನು ನೆರವೇರಿಸಿದರು. ಕೊನೆಯದಾಗಿ ತುಮಕಲಹಳ್ಳಿ ಗ್ರಾಮದಲ್ಲಿ ಚಿಕ್ಕಬಳ್ಳಾಪುರ ನಗರಾಭಿವೃದ್ಧಿ ಪ್ರಾಧಿಕಾರದ ಕಟ್ಟಡದ ನೆಲ ಅಂತಸ್ತು ಮತ್ತು ಒಂದನೇ ಅಂತಸ್ತು ನಿರ್ಮಾಣ ಕಾಮಗಾರಿಗೆ ಭೂಮಿಪೂಜೆಯನ್ನು ನೆರವೆರಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಆರ್.ಲತಾ, ಜಿಲ್ಲಾಪಂಚಾಯತ್ ಮುಖ್ಯಕಾರ್ಯನಿರ್ವಾಣಾಧಿಕಾರಿ ಪಿ.ಶಿವಶಂಕರ್, ಉಪವಿಭಾಗಾಧಿಕಾರಿ ಡಾ.ಜಿ.ಸಂತೋಷ್ ಕುಮಾರ್, ತಾಲ್ಲೂಕು ತಹಸೀಲ್ದಾರ್ ಗಣಪತಿ ಶಾಸ್ತ್ರಿ, ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ನಿಗಮ ನಿಯಮಿತ ಅಧ್ಯಕ್ಷರಾದ ಕೆ.ವಿ.ನಾಗರಾಜು, ನಗರಸಭೆ ಅಧ್ಯಕ್ಷರಾದ ಆನಂದರೆಡ್ಡಿ ಬಾಬು, ಪೌರಾಯುಕ್ತ ಮಾಹಂತೇಶ್, ನಗರಸಭೆ ಸದಸ್ಯರು ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಹಾಜರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments