Thursday, April 25, 2024
spot_img
HomeChikballapurಕನ್ನಡ ಸಾರಸ್ವತ ಲೋಕಕ್ಕೆ ಚಂಪಾರವರು ಅಪಾರ ಕೊಡುಗೆ ನೀಡಿದ್ದಾರೆ

ಕನ್ನಡ ಸಾರಸ್ವತ ಲೋಕಕ್ಕೆ ಚಂಪಾರವರು ಅಪಾರ ಕೊಡುಗೆ ನೀಡಿದ್ದಾರೆ

ಚಿಕ್ಕಬಳ್ಳಾಪುರ: ಬಂಡಾಯ ಸಾಹಿತಿ, ಕನ್ನಡ ಹೋರಾಟಗಾರ ಚಂದ್ರಶೇಖರ ಪಾಟೀಲ ಅವರನ್ನು ಕಳೆದುಕೊಂಡಿರುವುದು ಕನ್ನಡ ಸಾರಸ್ವತ ಲೋಕಕ್ಕೆ ತುಂಬಲಾರದ ನಷ್ಟ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಡಾ.ಕೋಡಿರಂಗಪ್ಪ ತಿಳಿಸಿದರು.

ನಗರದ ಡಾ‌.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಭಾನುವಾರ ಸಂಜೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಹಮ್ಮಿಕೊಂಡಿದ್ದ ಬಂಡಾಯ ಸಾಹಿತಿ ಡಾ.ಚಂದ್ರಶೇಖರ ಪಾಟೀಲ (ಚಂಪಾ), ಖ್ಯಾತ ಜನಪದ ಗಾಯಕಸವಲಿಂಗಯ್ಯ ಹೀರೇಮಠ್ ಹಾಗೂ ಸ್ಥಳೀಯ ಪತ್ರಕರ್ತ ಚಿ.ವೀರಶೇಖರ್ ಅವರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕನ್ನಡ ಸಾರಸ್ವತ ಲೋಕಕ್ಕೆ ಚಂಪಾರವರು ಅಪಾರ ಕೊಡುಗೆ ನೀಡಿದ್ದಾರೆ. ಸಂಕ್ರಮಣ ಎಂಬ ಸಾಹಿತ್ಯ ಪತ್ರಿಕೆಯನ್ನು ಐದು ದಶಕಗಳಿಗೂ ಹೆಚ್ಚು ಕಾಲ ನಡೆಸಿಕೊಂಡು ಬರುವ ಮೂಲಕ ಅನೇಕ ಯುವ ಬರಹಗಾರರನ್ನು ಬೆಳಕಿಗೆ ತಂದರು. ಪ್ರಗತಿಪರ ಚಿಂತಕರಾಗಿದ್ದ ಅವರು ಕನ್ನಡ ಚಳುವಳಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಪ್ರಾಮಾಣಿಕವಾಗಿ ದುಡಿದವರು. ಸಾಮಾಜಿಕ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಅವಿರತ ಶ್ರಮಿಸಿದ ಅವರು ಪ್ರಖರ ವೈಚಾರಿಕತೆಯನ್ನು ಹೊಂದಿದ್ದವರು. ಅವರು ಅನೇಕ ಯುವ ಬರಹಗಾರರನ್ನು ಪ್ರೇರೇಪಿಸುವಂತ ಪ್ರಖರ ಚಿಂತಕರಾಗಿದ್ದರು. ಅವರನ್ನು ಕಳೆದುಕೊಂಡಿರುವುದು ಕನ್ನಡ ನಾಡಿಗೆ ಬಹುದೊಡ್ಡ ನಷ್ಟ. ಅವರು ಭೌತಿಕವಾಗಿ ನಮ್ಮ‌ ಜೊತೆಗೆ ಇಲ್ಲದಿದ್ದರೂ ಅವರ ಸಮಾಜಮುಖಿ, ಜನಪರ ಸಾಹಿತ್ಯ, ಚಿಂತನೆಗಳು ಸದಾ ಎಲ್ಲರೊಂದಿಗೆ ಇರುತ್ತವೆ ಎಂದರು.

ಜನಪದ ಗಾಯಕ, ರಂಗಭೂಮಿ ನಿರ್ದೇಶಕ ಬಸವಲಿಂಗಯ್ಯ ಹಿರೇಮಠ ಅವರು ಜನಪದ ಕಲಾಪ್ರಕಾರಗಳಾದ ಸಣ್ಣಾಟ ಮತ್ತು ದೊಡ್ಡಾಟಗಳನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದರು. ಜೊತೆಗೆ ಕಂಚಿನ ಕಂಠದ ವಿಶಿಷ್ಟ ಶೈಲಿಯ ಜನಪದ ಗಾಯಕರು ಎಂದು ಗುಣಗಾನ ಮಾಡಿದರು.

ಚಿ.ವೀರಶೇಖರ್ ಅವರು ಪತ್ರಕರ್ತರಾಗಿದ್ದವರು. 

ನಾಟಕ ಕ್ಷೇತ್ರದಲ್ಲಿ ದುಡಿದು ಕನ್ನಡ ಹೋರಾಟಗಾರರಾಗಿಯೂ ಗಮನ ಸೆಳೆದವರು ಎಂದರು.

ಕನ್ನಡ ಉಪನ್ಯಾಸಕ ಎನ್.ಚಂದ್ರಶೇಖರ್ ಮಾತನಾಡಿ, ಚಂಪಾ ಅವರ ಸಾಹಿತ್ಯ ಇಂದಿನ ಯುವ ಪೀಳಿಗೆಗೆ ಆದರ್ಶ. ಸಾಮಾಜಿಕ ನ್ಯಾಯದ ಪರವಾಗಿದ್ದ ಚಂಪಾ ಅವರು ಹುಟ್ಟು ಹೋರಾಟಗಾರರು. ಇಂಗ್ಲಿಷ್ ಸಾಹಿತ್ಯ ಓದಿದ್ದರೂ ಕನ್ನಡ ಸಾಹಿತ್ಯ ಲೋಕಕ್ಕೆ ಗಮನಾರ್ಹ ಕೊಡುಗೆ ನೀಡಿ, ಆ ಕ್ಷೇತ್ರದಲ್ಲಿ ಶಾಶ್ವತವಾದ ಕೆಲಸ ಮಾಡಿದ್ದಾರೆ. ಸೃಜನಶೀಲ ಮತ್ತು ಕ್ರಿಯಾಶೀಲರಾಗಿದ್ದ ಚಂಪಾ ಅವರದ್ದು ರಾಜಿಯಾಗದ ವ್ಯಕ್ತಿತ್ವ. ಅವರ ಸಾಹಿತ್ಯ ಕೃತಿಗಳನ್ನು ಅಧ್ಯಯನ ಮಾಡುವತ್ತ ಪ್ರೇರೇಪಿಸುವ ಕೆಲಸ ಮಾಡಬೇಕಾಗಿದೆ. ಜಿಲ್ಲಾ ಕಸಾಪ ಚಂಪಾ ಅವರ ನುಡಿನಮನ ಹೆಸರಿನಲ್ಲಿ ರಾಜ್ಯ ಮಟ್ಟದ ಕಾರ್ಯಕ್ರಮವೊಂದನ್ನು ಆಯೋಜಿಸುವ ಮೂಲಕ ಅವರಿಗೆ ನಿಜವಾದ ಗೌರವ ಸಲ್ಲಿಸಬೇಕು ಎಂದು ತಿಳಿಸಿದರು. ಖ್ಯಾತ ಜನಪದ ಗಾಯಕ ಬಸವಲಿಂಗಯ್ಯ ಹೀರೇಮಠ ಅವರ ಸಾಧನೆಯನ್ನು ಈಗಿನ ಯುವ ಕಲಾವಿದರು ಒಮ್ಮೆ ಗಂಭೀರವಾಗಿ ನೋಡಬೇಕು ಎಂದರು. ಪತ್ರಕರ್ತ ಚಿ.ವೀರಶೇಖರ್ ಅವರು ಮಾಧ್ಯಮ,ನಾಟಕ ಕ್ಷೇತ್ರದಲ್ಲಿ ಉತ್ತಮ‌ ಕೆಲಸ ಮಾಡಿದ್ದಾರೆ ಎಂದರು.

ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಎಸ್.ಎನ್.ಅಮೃತ್ ಕುಮಾರ್ ಮಾತನಾಡಿ, ಚಂಪಾ, ಬಸವಲಿಂಗಯ್ಯ ಹಿರೇಮಠ ಹಾಗೂ ಚಿ.ವೀರಶೇಖರ್ ಅವರ ಅಗಲಿಕೆ ಅತೀವ ನೋವು ತಂದಿದೆ ಎಂದರು.

ಗಾಯಕ ಗ.ನ.ಅಶ್ವಥ್ ಮಾತನಾಡಿ, ಬಸವಲಿಂಗಯ್ಯ ಹಿರೇಮಠ, ಚಂಪಾ ಅವರಂತ ಶ್ರೇಷ್ಠ ಚಿಂತಕರು ಸಮಾಜಕ್ಕೆ ಅಗತ್ಯವಿದೆ. ಶೋಷಿತರು, ನೊಂದವರು ಮತ್ತು ಅವಕಾಶ ವಂಚಿತರ ಪರ ಸದಾ ಮಿಡಿಯುತ್ತಿದ್ದ ಮನಸ್ಸುಗಳವು ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಎಂ.ಜಯರಾಂ, ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷೆ ಉಷಾಶ್ರೀನಿವಾಸ್, ಪ್ರಧಾನ ಕಾರ್ಯದರ್ಶಿ ಜನಾರ್ಧನ‌ಮೂರ್ತಿ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಯ ಜಿಲ್ಲಾ ಘಟಕದ ಪದಾಧಿಕಾರಿ ರವಿಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ‌ ನಿರ್ದೇಶಕ ಎಂ.ಡಿ.ರವಿಕುಮಾರ್, ವಿಶ್ವವಿದ್ಯಾಲಯ ಶಿಕ್ಷಣ ಕಾಲೇಜಿನ ಪ್ರಾಧ್ಯಾಪಕ ಡಾ.ಶಂಕರ್, ಶಿಕ್ಷಕರಾದ ಸರ್ದಾರ್ ಚಾಂದ್ ಪಾಷಾ, ಚಲಪತಿಗೌಡ, ತತ್ತೂರು ಲೋಕೇಶಪ್ಪ ಮತ್ತಿತರರು ಹಾಜರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments