Wednesday, September 27, 2023
spot_img
HomeChikballapurಸಾಹಿತ್ಯದಿಂದ ಮಾತ್ರ ಸಂಸ್ಕಾರವನ್ನು ಕಲಿಯಲು ಸಾಧ್ಯ: ಪ್ರೋ|| ಕೋಡಿರಂಗಪ್ಪ

ಸಾಹಿತ್ಯದಿಂದ ಮಾತ್ರ ಸಂಸ್ಕಾರವನ್ನು ಕಲಿಯಲು ಸಾಧ್ಯ: ಪ್ರೋ|| ಕೋಡಿರಂಗಪ್ಪ

ಚಿಕ್ಕಬಳ್ಳಾಪುರ: ಜಿಲ್ಲಾದ್ಯಂತ ಕನ್ನಡ ಸಾಹಿತ್ಯವೆಂಬ ತೇರನ್ನು ಎಳೆಯುವ ಸಂಕಲ್ಪವನ್ನು ಮಾಡಿ ಕನ್ನಡ ಸಾಹಿತ್ಯ ಚಟುವಟಿಕೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಗತ್ಯ ಕ್ರಮ ಕೈಗೊಂಡಿದೆ ಎಂದು ಚಿಕ್ಕಬಳ್ಳಾಪುರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಪ್ರೋ|| ಕೋಡಿರಂಗಪ್ಪ ರವರು ತಿಳಿಸಿದರು.

ಅವರು ಶನಿವಾರ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಆಯೋಜಿಸಲಾಗಿದ್ದ ಜಿಲ್ಲಾ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿಯ ಸದಸ್ಯರ ಪದಗ್ರಹಣ ಹಾಗೂ ಸಾಹಿತ್ಯ ಚಟುವಟಿಕೆಗಳ ಉದ್ಘಾಟನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

1915 ರಲ್ಲಿ ಮೈಸೂರು ರಾಜ ನಾಲ್ವಡಿ ಕೃಷ್ಣರಾಜ ಒಡೆಯರ್, ಅಂದಿನ ದಿವಾನರಾದ ಸರ್.ಎಂ.ವಿಶ್ವೇಶ್ವರಯ್ಯನವರ ದೂರದೃಷ್ಟಿಯಿಂದ ಜನತಾ ಶಾಲೆ ಹಾಗೂ ಚಲನಶೀಲವಾದಂತಹ ವಿಶ್ವವಿದ್ಯಾಲಯವನ್ನಾಗಿ ರೂಪಿಸುವ ಹಾಗೂ ಓದುವ ಸಮಾಜವನ್ನು ನಿರ್ಮಿಸುವ ಆಶಯದಿಂದ ಕನ್ನಡ ಸಾಹಿತ್ಯ ಪರಿಷತ್ತನ್ನು ಆರಂಭಿಸಲಾಗಿದೆ. ಈ ನಿಟ್ಟಿನಲ್ಲಿ ಕನ್ನಡ ಸಾಹಿತ್ಯವನ್ನು ಶಾಲಾ-ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಜನ ಸಾಮಾನ್ಯರ  ಬಳಿ ಕೊಂಡ್ಯೊಯುವ ಮಹತ್ವ ಕಾರ್ಯವನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕೈಗೊಂಡಿದೆ ಎಂದು ಅವರು ತಿಳಿಸಿದರು.

ಕನ್ನಡ ಸಾಹಿತ್ಯಕ್ಕೆ 2000 ವರ್ಷಗಳ ಐತಿಹಾಸಿಕ ಹಿನ್ನೆಲೆ ಇದೆ. ಆದಿ ಕವಿ ಪಂಪ 1500 ವರ್ಷಗಳ ಹಿಂದೆ ‘ಮಾನವ ಜಾತಿ ತಾನೊಂದೆ ಒಲಂ’ ಎಂದು ಹೇಳಿದ್ದಾರೆ. ಈ ವಿಚಾರವನ್ನು ಪ್ರಸ್ತುತ ಸಮಾಜದಲ್ಲಿ ಅಳವಡಿಸಿಕೊಂಡು ಅರಿತು ಬಾಳುವುದು ಇಂದಿನ ಪೀಳಿಗೆಯ ಜವಬ್ದಾರಿಯಾಗಿದೆ.  ಸಾಹಿತ್ಯದಿಂದ ಮಾತ್ರ ಸಂಸ್ಕಾರವನ್ನು ಕಲಿಯಲು ಸಾಧ್ಯ. ಪ್ರಸ್ತುತ ಸ್ಥಿತಿಯಲ್ಲಿ ಪಂಪ, ಬುದ್ಧ ಹಾಗೂ ಸ್ವಾಮಿ ವಿವೇಕಾನಂದರ  ಮತ್ತು ಕುವೆಂಪು ರವರ ವಿಶ್ವಮಾನವ ಪರಿಕಲ್ಪನೆಯಲ್ಲಿ ತಾವೆಲ್ಲರೂ ಅರಿತು ನಡೆಯಬೇಕಾಗಿದೆ ಎಂದರು. 

ಭಾರತರತ್ನ ಪ್ರಶಸ್ತಿ ಪುರಸ್ಕೃತ ಸರ್.ಎಂ.ವಿಶ್ವೇಶ್ವರಯ್ಯ, ವಿಜ್ಞಾನಿ ಸಿ.ಎನ್.ರಾವ್, ಜಚನಿ ಹಾಗೂ ಶಿಕ್ಷಣ ತಜ್ಞ ಎಚ್.ನರಸಿಂಹಯ್ಯ ನವರಂತಹ ಮಹಾನ್ ವ್ಯಕ್ತಿಗಳು ಚಿಕ್ಕಬಳ್ಳಾಪುರ ಜಿಲ್ಲೆಯವರಾಗಿದ್ದು ಅವರೆಲ್ಲರ ವಿಚಾರಗಳನ್ನು ಸಾಹಿತ್ಯದ ಮೂಲಕ ಹಾಗೂ ಇತರ ಲಭ್ಯ ಪುಸ್ತಕಗಳ ಮೂಲಕ ಓದಿ ತಿಳಿದುಕೊಳ್ಳಬೇಕು. ಪುಸ್ತಕಗಳನ್ನು ಓದುವ ಮೂಲಕ ವಿಚಾರಶೀಲರಾಗಿ, ಪ್ರಶ್ನಾ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ಓದುವ ಸಮಾಜ ನಮ್ಮದಾಗಬೇಕು. ಮನುಷ್ಯನ ಚಿಂತನೆಗಳು ವಿಕಾಸಗೊಳ್ಳಲು ಕನ್ನಡ ಸಾಹಿತ್ಯದ ಅಧ್ಯಯನ ಮುಖ್ಯ ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಪುಸ್ತಕಗಳನ್ನು ಓದುವ ಹವ್ಯಾಸವನ್ನು ಹೆಚ್ಚಾಗಿ ಬೆಳೆಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು. 

ರಾಜ್ಯ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಕಾಶನ ಮತ್ತು ಅಧ್ಯಯನಶೀಲ ವಿಭಾಗದ ಮುಖ್ಯಸ್ಥರಾದ ರಾಜ್ ಕುಮಾರ್ ಅವರು ಮಾತನಾಡಿ, ಭಾರತರತ್ನ ಪ್ರಶಸ್ತಿ ಪುರಸ್ಕೃತ ಸರ್.ಎಂ.ವಿಶ್ವೇಶ್ವರಯ್ಯ, ವಿಜ್ಞಾನಿ ಸಿ.ಎನ್.ರಾವ್ ಹಾಗೂ ಶಿಕ್ಷಣ ತಜ್ಞ ಎಚ್.ನರಸಿಂಹಯ್ಯ ನವರಂತಹ ಮಹಾನ್ ವ್ಯಕ್ತಿಗಳು ಚಿಕ್ಕಬಳ್ಳಾಪುರ ಜಿಲ್ಲೆಯವರಾಗಿರುವುದು ನಮ್ಮೆಲ್ಲರ ಹೆಮ್ಮೆಯ ಸಂಗತಿಯಾಗಿದೆ. ಅಲ್ಲದೆ ಜಗತ್ತಿನಲ್ಲಿ ಅತ್ಯಂತ ವಿಸ್ಮಯಕಾರಿಯಾದ ಹಾಗೂ ಅಮೂಲಾಗ್ರವಾಗಿ ಸಂಶೋಧಿಸುತ್ತಿರುವ ಕುತೂಹಲಕಾರಿ ಕಾವ್ಯ ಯಾವುದಾದರೂ ಇದೆ ಎಂದರೆ ಅದು ಚಿಕ್ಕಬಳ್ಳಾಪುರ ಜಿಲ್ಲೆಯ ಯಲವನಹಳ್ಳಿಯ ಕುಮುದೇಂದು ಮಹಾ ಮುನಿ ಕವಿ ರಚಿಸಿರುವ ‘ಸಿರಿಭೂವಲಯ’ವಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಕೆ.ಎಂ.ಜಯರಾಮರೆಡ್ಡಿ, ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಜಿ.ಹರೀಶ್, ಹಿರಿಯ ಲೇಖಕ ನಾಗರಾಜು, ವಾರ್ತಾ ಇಲಾಖೆಯ ಸಹಾಯಕ ನಿರ್ದೇಶಕರಾದ ಎಂ.ಜುಂಜಣ್ಣ, ಸಾಹಿತ್ಯ ಪರಿಷತ್ತಿನ ಸದಸ್ಯರಾದ ಹನುಮಂತರಾವ್, ವೀರಣ್ಣ, ಗೋಪಾಲ ಗೌಡ ಕಲ್ವ ಮಂಜಲಿ, ರವೀಂದ್ರ, ಸರಸಮ್ಮ, ನಂದಕುಮಾರ್, ಮುನಿಸ್ವಾಮಿ ಸೇರಿದಂತೆ ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು. ಈ ವೇಳೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿಯ ಸದಸ್ಯರು ಹಾಗೂ ತಾಲ್ಲೂಕು ಘಟಕದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರುಗಳು ಪದಗ್ರಹಣ ಕಾರ್ಯಕ್ರಮ ನಡೆಯಿತು. ವಿವರ ಕೆಳಕಂಡಂತಿದೆ.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿಯ ವಿವರ

ಗೌರವ ಕಾರ್ಯದರ್ಶಿ ಅಮೃತ್ ಕುಮಾರ್ ಎಸ್.ಎನ್. ಹಾಗೂ ಕೃಷ್ಣ ಬಿ.ಆರ್. ಗೌರವ ಖಜಾಂಚಿಯಾಗಿ ಚನ್ನಮಲ್ಲಿಕಾರ್ಜುನಾ, ಗೌರವ ಸಂಘಟನಾ ಕಾರ್ಯದರ್ಶಿ ಚಲಪತಿ ಗೌಡ ಹಾಗೂ ಟಿ.ವಿ.ಚಂದ್ರಶೇಖರ್, ಕಾರ್ಯಕಾರಿ ಸಮಿತಿಯ ಸದಸ್ಯರಾದ ಸುಧಾ ವೆಂಕಟೇಶ್, ಮುನಿನಾರಾಯಣಪ್ಪ, ಎನ್.ಚಂದ್ರಶೇಖರ್, ಪ್ರೇಮಾ ಲೀಲಾ ವೆಂಕಟೇಶ್, ಕಲಾ ನಾಗರಾಜ್, ಸರ್ದಾರ್ ಚಾಂದ್ ಪಾಷಾ, ಪಟೇಲ್ ನಾರಾಯಣ ಸ್ವಾಮಿ, ಮಂಚಲಬಲೆ ಶ್ರೀನಿವಾಸ್ ಹಾಗೂ ಕುಂಟಗಡ್ಡೆ ಲಕ್ಷ್ಮಣ್.

ತಾಲ್ಲೂಕು ಘಟಕದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರುಗಳು

ಚಿಕ್ಕಬಳ್ಳಾಪುರ ತಾಲ್ಲೂಕು ಅಧ್ಯಕ್ಷರು- ಯಲ್ಲುವಳ್ಳಿ ಸೊಣ್ಣೆಗೌಡ,

ಶಿಡ್ಲಘಟ್ಟ ತಾಲ್ಲೂಕು ಅಧ್ಯಕ್ಷರು-  ಬಿ.ಆರ್.ಅನಂತಕೃಷ್ಣ,

ಚಿಂತಾಮಣಿ ತಾಲ್ಲೂಕು ಅಧ್ಯಕ್ಷರು-ದೇವತಾ ದೇವರಾಜ್,

ಗೌರಿಬಿದನೂರು ತಾಲ್ಲೂಕು ಅಧ್ಯಕ್ಷರು- ಟಿ.ನಂಜುಡಪ್ಪ,

ಗುಡಿಬಂಡೆ ತಾಲ್ಲೂಕು ಅಧ್ಯಕ್ಷರು-  ಸುಬ್ಬರಾಯಪ್ಪ  

ಬಾಗೇಪಲ್ಲಿ ತಾಲ್ಲೂಕು ಅಧ್ಯಕ್ಷರು-  ಕೃಷ್ಣಾರೆಡ್ಡಿ

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments